ಬೆಂಗಳೂರು: ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡಿದ್ದು, ಇದರಿಂದ ರಾಜ್ಯದ ಜನತೆಗೆ ಮತ್ತೊಂದು ದರ ಹೆಚ್ಚಳದ ಆಘಾತ ಎದುರಾಗಿದೆ.
ಮಾರ್ಚ್ 31ರ ವರೆಗೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ಶೇಕಡಾ 18.44 ಇತ್ತು. ಆದರೆ ಏಪ್ರಿಲ್ 1ರಿಂದ ಈ ದರವನ್ನು ಶೇಕಡಾ 21.17ಕ್ಕೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆ 2 ರೂಪಾಯಿ ಏರಿಕೆಯಾಗಿದೆ.
ಈಗಾಗಲೇ ಟೋಲ್ ದರ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಡೀಸೆಲ್ ದರ ಹೆಚ್ಚಳವು ಮತ್ತಷ್ಟು ಚಿಂತೆ ತಂದಿದೆ.
ಎಷ್ಟಿತ್ತು, ಎಷ್ಟಾಯಿತು?
ಕರ್ನಾಟಕದಲ್ಲಿ ಮಾರ್ಚ್ 31ರವರೆಗೆ ಡೀಸೆಲ್ ದರ ಪ್ರತಿ ಲೀಟರ್‌ಗೆ 89.02 ರೂಪಾಯಿ ಇತ್ತು. ಈಗ ಅದು 91.02 ರೂಪಾಯಿಗೆ ಏರಿದೆ.
ತಗ್ಗಿಸಿ ಮತ್ತೆ ಏರಿಸಿದ ಸರ್ಕಾರ
ಕರ್ನಾಟಕದಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರವು 04-11-2021ಕ್ಕೆ ಮೊದಲು ಶೇಕಡಾ 24 ಇತ್ತು. ಆಗ ಪ್ರತಿ ಲೀಟರ್ ಡೀಸೆಲ್ ಬೆಲೆ 92.03 ರೂಪಾಯಿ ಆಗಿತ್ತು. ಆದರೆ 15-06-2024ರಂದು ರಾಜ್ಯ ಸರ್ಕಾರವು ತೆರಿಗೆ ದರವನ್ನು ಶೇಕಡಾ 18.44ಕ್ಕೆ ಇಳಿಸಿತ್ತು. ಇದೀಗ ಪರಿಸರ ಪ್ರಾಧಿಕಾರದ ಅನುಮೋದನೆ ಬಳಿಕ, 01-04-2025ರಿಂದ ತೆರಿಗೆ ದರವನ್ನು ಶೇಕಡಾ 21.17ಕ್ಕೆ ಏರಿಸಲಾಗಿದೆ.
ಇದರಿಂದ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳವಾಗಿ, ಡೀಸೆಲ್ ಬೆಲೆ 91.02 ರೂಪಾಯಿಗೆ ತಲುಪಿದೆ.ಆದಾಗ್ಯೂ, ಈ ಏರಿಕೆಯ ನಂತರವೂ ಕರ್ನಾಟಕದ ಡೀಸೆಲ್ ಬೆಲೆ ಪಕ್ಕದ ರಾಜ್ಯಗಳಿಗಿಂತ ಕಡಿಮೆ ಇರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.