ಕನ್ನಡ ಫೋಸ್ಟ್ ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಡಿ.4 ರಂದು ಪ್ರಾರಂಭಗೊಂಡಿದ್ದ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ವಿಶ್ವನಾಥಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ಸಮಾಪ್ತಿಗೊಂಡಿತು.
ಡಿ.4 ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯ ಧರ್ಮ ದ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದು ಪುನರ್ನಿರ್ಮಾಣಗೊಂಡಿರುವ ದೇಗುಲಗಳ ಲೋಕಾರ್ಪಣೆ ಕಾರ್ಯ ನೆರವೇರಿಸಿದ್ದರು.
ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಪೂಜಾ ವಿದಿ ವಿಧಾನಗಳನ್ನು ಕೈಗೊಂಡಿದ್ದು ಶ್ರೀಕ್ಷೇತ್ರ ಕುಂದೂರು ಮಠದ ಈ ಹಿಂದಿನ ಎಲ್ಲ ಪೀಠಾಧ್ಯಕ್ಷರ ಪುಣ್ಯರಾಧನೆ ಕಾರ್ಯ ನೆರೆವೇರಿತು.
ಡಿಸೆಂಬರ್ 4 ರಂದು ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಾಲನೆ ನೀಡಿದ ಜಾತ್ರಾ ಮಹೋತ್ಸವ ಅತ್ಯಂತ ಯಶಸ್ಸು ಕಂಡಿದೆ. ಪ್ರತಿದಿನ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅನ್ನದಾಸೋಹ ಜರುಗಿತು.
ಕಾರ್ಯಕ್ರಮಗಳಲ್ಲಿ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಶ್ರೇಯಸ್ ಎಂ.ಪಟೇಲ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶ್‌ಗೌಡ, ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ.ಮದನ್ ಗೌಡ ಹಾಗೂ ಇತರರು ಇದ್ದರು.