ಹಾಸನ: ಆನೆ ಅರ್ಜುನನ ಸಾವಿನ ಪ್ರಕರಣದ ತನಿಖೆಗೆ ಬಂದಿರುವ ವಿಶೇಷ ತನಿಖಾ ತಂಡ ಇಂದು ಕೂಡ ನಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ತನಿಖೆ ಮುಂದುವರಿಸಿತು.
ವಿಶೇಷ ತನಿಖಾಧಿಕಾರಿ ನಿವೃತ್ತ ಮುಖ್ಯ ವನ್ಯಪಾಲಕ ಅಜಯ್ ಮಿಶ್ರಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳು, ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ.
ಗುರುವಾರ ಅರ್ಜುನನ ಸಮಾಧಿ ಸ್ಥಳವಾದ ಸಕಲೇಶಪುರ ತಾಲೂಕು ಯಾಸಳೂರು ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ತನಿಖಾ ತಂಡ ನೆನ್ನೆ ಮಧ್ಯಾಹ್ನ ದಿಂದ ತನಿಖೆ ಆರಂಭಿಸಿ ರಾತ್ರಿ ಸುಮಾರು 10 ಗಂಟೆ ವರೆಗೂ ತನಿಖೆ ನಡೆಸಿತ್ತು.
ಶುಕ್ರವಾರ ಕೂಡ ತನಿಖೆ ಮುಂದುವರೆದಿದ್ದು, ಡಾಟ್ ಗೆ ಬಳಸಿದ ಗನ್, ಔಷದಿ ಬಗ್ಗೆಯೂ ವೈದ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಇದ್ದ ಪ್ರತಿಯೊಬ್ಬರನ್ನೂ ತೀವ್ರ ವಿಚಾರಣೆ ನಡೆಸುತ್ತಿರುವ ತನಿಖಾ ತಂಡ ಮಹತ್ವದ ವಿಚಾರಗಳ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದೆ.