ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಪೌರ ಕಾರ್ಮಿಕರ ಪ್ರತಿಭಟನೆ

ಹಾಸನ: ನಗರಸಭೆ ಪೌರ ಕಾರ್ಮಿಕರಿಗೆ 2ನೇ ಹಂತದಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು  ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ  ನೇತೃತ್ವದಲ್ಲಿ ಕಾರ್ಮಿಕರು  ಪ್ರತಿಭಟನೆ ನಡೆಸಿದರು.

2017ರ ಜುಲೈ 22ರ ನಗರಸಭೆ ನಡಾವಳಿ ಅನ್ವಯ ಕಸಬಾ ಗ್ರಾಮದ ಸರ್ವೆ ನಂ.ನಂ. 273 ಮತ್ತು 274ರಲ್ಲಿ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಆದರೆ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿದ್ದಾಗ ಕೆಲ ವ್ಯಕ್ತಿಗಳು ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಪೌರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮೊದಲನೇ ಹಂತದಲ್ಲಿ 41 ಪೌರ ಕಾರ್ಮಿಕರಿಗೆ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು ಅಂತಿಮ ಹಂತದಲ್ಲಿದೆ. ಅದೇ ರೀತಿ ಎರಡನೇ ಹಂತದ ಕಾಮಗಾರಿಯನ್ನು ಸಹ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿ ಎಸಿ ಮಾರುತಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಮಾರುತಿ, ಈಗಾಗಲೇ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಚರ್ಚೆಗೆ ಶೀಘ್ರವೇ ಸಭೆ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ನಾಗರಾಜ್ ಹೆತ್ತೂರು, ಜಿಲ್ಲಾ ಸಂಚಾಲಕ ಕೃ್ಷ್ಣದಾಸ್, ಪರಶುರಾಮ್ ಹಾಗೂ ಇತರರಿದ್ದರು.