ಮುಚ್ಚಿತು ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಮರೆಗೆ ಸರಿದ ಶಕ್ತಿದೇವತೆ: ಕಾದು ನಿಂತ ಭಕ್ತರಿಗೆ ವಿಶ್ವರೂಪ ದರ್ಶನ ಕಲ್ಪಿಸಿದ ಜಿಲ್ಲಾಡಳಿತ

ಹಾಸನ: ಹನ್ನೆರಡು ದಿನಗಳ ದರ್ಶನ ಭಾಗ್ಯ ಕರುಣಿಸಿದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ 12.33ಕ್ಕೆ ಮುಚ್ಚಲಾಯಿತು. ಈ ಮೂಲಕ ಶಕ್ತಿದೇವತೆ ಒಂದು ವರ್ಷದ ಅವಧಿಗೆ ತೆರೆಮರೆಗೆ ಸರಿದಳು.

ಬೆಳಗ್ಗೆ ಪೂಜೆ, ನೈವೇದ್ಯಕ್ಕಾಗಿ ಸಾರ್ವಜನಿಕ ದರ್ಶನ ಬಂದ್ ಆದ್ದರಿಂದ ಸಾವಿರಾರು ಭಕ್ತರು ದರ್ಶನ ಸಾಧ್ಯವಾಗದೇ ನಿರಾಸೆ ಅನುಭವಿಸಿದ್ದರು. ಆದರೂ ಕಾದು ಕುಳಿತು ದರ್ಶನಕ್ಕಾಗಿ ಅವಕಾಶ ಕೇಳಿದ ಭಕ್ತರ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಸಾಲಿನಲ್ಲಿ ನಿಂತವರಿಗೆ ದೇವಿ ವಿಶ್ವರೂಪ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು.

ಸಂಪ್ರದಾಯದಂತೆ ಪೂಜೆ, ನೈವೇದ್ಯ ನೆರವೇರಿಸಿ ನಂದಾದೀಪ ಹಚ್ಚಿಟ್ಟ ಅರ್ಚಕರು ಜಿಲ್ಲಾಡಳಿತದ ಅಧಿಕಾರಿಗಳ ಸಮಕ್ಷಮದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಿ ಕೀಲಿ ಕೈ ಅನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು.

ಅ.24 ಗರ್ಭಗುಡಿ ಬಾಗಿಲು ತೆರೆಯುವಾಗ, ಅ.28 ರಂದು ಸಿಎಂ ಬಂದಾಗ ಹಾಜರಿದ್ದ ಸಚಿವ ಕೆ.ಎನ್.ರಾಜಣ್ಣ, ಅನಾರೋಗ್ಯದ ಕಾರಣ ನೀಡಿ  ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಗೈರಾಗಿದ್ದರು. ಅವರು ನ.1ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಬಂದಿರಲಿಲ್ಲ.

ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಎಚ್‌.ಪಿ. ಸ್ವರೂಪ್‌ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹಮದ್ ಸುಜೀತಾ, ದೇವಾಲಯದ ಆಡಳಿತಾಧಿಕಾರಿ ಮಾರುತಿ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಯಿತು.