ಸಕಲೇಶಪುರ ತಾಲೂಕಿನ ಮಗಜಹಳ್ಳಿ ಫಾಲ್ಸ್ ನಲ್ಲಿ ಈಜಾಟ, ಮೋಜು-ಮಸ್ತಿಗೆ ಪೊಲೀಸ್ ಬ್ರೇಕ್

ಸಕಲೇಶಪುರ: ತಾಲೂಕಿನ ಹಾನುಬಾಳು ಸಮೀಪದ ಮಗಜಹಳ್ಳಿ ಜಲಪಾತದಲ್ಲಿ ಈಜುವುದ‌ನ್ನು ನಿಷೇಧಿಸಿ ಗ್ರಾಮಾಂತರ ಠಾಣೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಅತಿಯಾದ ಮಳೆಯ ಕಾರಣ ನೀರಿನ ಹರಿವು ಜಾಸ್ತಿ ಇರುವುದರಿಂದ ಮಗಜಹಳ್ಳಿ ಗ್ರಾಮದ ಅಬ್ಬೀ ಫಾಲ್ಸ್ ನಲ್ಲಿ ಪ್ರವಾಸಿಗರು ಈಜಲು ಹೋಗುವುದನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ಜಲಪಾತದ ಹತ್ತಿರ ಹೋಗುವುದು ಮತ್ತು ಫಾಲ್ಸ್ ನ ಸುತ್ತಮುತ್ತ ಮೋಜು ಮಸ್ತಿ ಮಾಡುವುದು ಸಹ ನಿಷೇಧಿಸಲಾಗಿದೆ ಎಂದು ಪೋಸ್ಟರ್ ಮೂಲಕ ಸೂಚನೆ ನೀಡಲಾಗಿದೆ.

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಮೋಜು, ಮಸ್ತಿ ಮಿತಿಮೀರಿದ ವರ್ತನೆಗಳ ಬಗ್ಗೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

ಎಲ್ಲಿದೆ ಮಗಜಹಳ್ಳಿ ಜಲಪಾತ?:
ಹೋಬಳಿ ಕೇಂದ್ರ ಹಾನುಬಾಳಿನಿಂದ 5 ಕಿಮೀ. ಮತ್ತು ಸಕಲೇಶಪುರದಿಂದ 21 ಕಿಮೀ. ದೂರದಲ್ಲಿರುವ ಮಗಜಹಳ್ಳಿ ಜಲಪಾತ ದಟ್ಟ ಹಸುರಿನ ನಡುವಿನ ರಮಣೀಯ ಪ್ರವಾಸಿ ತಾಣವಾಗಿದೆ.

ಹಾನುಬಾಳು ಫಾಲ್ಸ್ ಮತ್ತು ಅಬ್ಬಿ ಗುಂಡಿ ಜಲಪಾತ ಎಂದೂ ಕರೆಯಲ್ಪಡುವ ಈ ಜಲಪಾತದಲ್ಲಿ ಸುಮಾರು 20 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಪ್ರವಾಸಿಗರು ಪುಷ್ಪಗಿರಿ ಪರ್ವತ ಶ್ರೇಣಿಯ ಅದ್ಭುತ ನೋಟವನ್ನು ಜಲಪಾತದ ಸ್ಥಳವನ್ನು ಆಸ್ವಾದಿಸಬಹುದು.