ಹಾಸನ: ಒಂದು ಕಾಲದಲ್ಲಿ ಲೇಖಕ, ಗ್ರಂಥಪಾಲಕ ದಿ.ಚಂದ್ರಶೇಖರ ಧೂಲೇಕರ್ ಅವರ ಶ್ರಮ, ಆಸಕ್ತಿ ಫಲವಾಗಿ ಮಾದರಿಯಾಗಿದ್ದ ಸಕಲೇಶಪುರ ಪಟ್ಟಣದ ಗ್ರಂಥಾಲಯದ ಛಾವಣಿ ಭಾರಿ ಮಳೆಗೆ ಸೋರುತ್ತಿದ್ದು, ಬೆಲೆಕಟ್ಟಲಾಗದ ಸಾವಿರಾರು ಪುಸ್ತಕಗಳು ನೀರು ಪಾಲಾಗುವ ಆತಂಕ ಎದುರಾಗಿದೆ.
ಭಾರಿ ಮಳೆಗೆ ಐಬಿ ರಸ್ತೆಯ ಸ್ಕೌಟ್ ಅಂಡ್ ಗೈಡ್ ಕಟ್ಟಡದಲ್ಲಿರುವ ಗ್ರಂಥಾಲಯದ ಛಾವಣಿ ಸೋರುತ್ತಿದ್ದು ಒಳ ಆವರಣದಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಈಗಾಗಲೇ ಹಲವಾರು ಪುಸ್ತಕಗಳು ನೀರಿನಿಂದ ಹಾಳಾಗಿದೆ.
ಹಳೇ ಕಟ್ಟಡವಾಗಿರುವ ಕಾರಣ ಛಾವಣಿಯ ಹಲವಾರು ಹೆಂಚುಗಳು ಒಡೆದು ಹೋಗಿದ್ದು ಮಳೆ ಬಂದರೆ ಒಳಭಾಗಕ್ಕೆ ನೀರು ಸೋರಿಕೆಯಾಗುತ್ತದೆ. ಹಲವಾರು ವರ್ಷಗಳಿಂದ ಇದೇ ಸ್ಥಿತಿ ಇರುವುದರಿಂದ ಈ ಬಾರಿ ಕಟ್ಟಡವೇ ಬಿದ್ದು ಹೋಗುವ ಆತಂಕ ಎದುರಾಗಿದೆ.
ಆದ್ದರಿಂದ ತಾಲೂಕು ಆಡಳಿತ ಎಚ್ಚೆತ್ತು ಕೂಡಲೇ ಗ್ರಂಥಾಲಯವನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.