ಸೋರುತ್ತಿದೆ ಹಾಸನ ರೈಲು ನಿಲ್ದಾಣದ ಛಾವಣಿ: ಮಳೆಯಲ್ಲಿ‌ ನೆನೆದು ಪರದಾಡುತ್ತಿರುವ ಪ್ರಯಾಣಿಕರು!

ಹಾಸನ, ಏಪ್ರಿಲ್ 03:  ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಮಧ್ಯಾಹ್ನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ, ಹಾಸನ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ‌ ಛಾವಣಿ ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ರೈಲ್ವೆ ನಿಲ್ದಾಣದ ಮೇಲ್ಛಾವಣಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೋರುತ್ತಿದ್ದು, ಪ್ಲಾಟ್‌ಫಾರ್ಮ್ ಸಂಪೂರ್ಣ ಜಲಾವೃತವಾಗಿದೆ. ಮಳೆ ನೀರಿನಲ್ಲಿಯೇ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರು ಕಂಗಾಲಾಗಿದ್ದಾರೆ. “ನಿಲ್ದಾಣದಲ್ಲಿ ಎಲ್ಲೆಡೆ ನೀರು ತುಂಬಿದೆ. ಕುಳಿತುಕೊಳ್ಳಲು ಜಾಗವಿಲ್ಲ, ಒಡಾಡಲೂ ಆಗುತ್ತಿಲ್ಲ. ಇದು ಯಾವ ರೀತಿಯ ಸೌಲಭ್ಯ?” ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರದ ಜಂಕ್ಷನ್ ರೈಲ್ವೆ ನಿಲ್ದಾಣವೊಂದು ಈ ರೀತಿ ಮಳೆಗೆ ತತ್ತರಿಸಿರುವುದು ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ. ಮಳೆಯಿಂದಾಗಿ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲೂ ನೀರು ನಿಂತಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರೈಲ್ವೆ ಇಲಾಖೆಯಿಂದ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.