ರಾಣಿ ಝರಿ ರಸ್ತೆಯಲ್ಲಿ ಸ್ಲಶ್ ರೇಸ್ ಹುಚ್ಚಾಟ: ಐವರ ಮೇಲೆ ಪ್ರಕರಣ, ನಾಲ್ಕು ಬೈಕ್ ವಶ

ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ರಾಣಿಝರಿಗೆ ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರುಮಯವಾಗಿದೆ. ಈ ಕೆಸರಿನಲ್ಲಿ ಭಾನುವಾರ ಬೈಕ್ ಸವಾರರು ಸ್ಲಶ್ ರೇಸ್ ಹುಚ್ಚಾಟ ನಡೆಸಿ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಿದ್ದ‌ ಐವರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ‌.

ಬೆಳ್ತಂಗಡಿ-ಉಜಿರೆ ವಾಸಿಗಳಾದ ಗಿರೀಶ್ ಬಿನ್ ಲಿಂಗಪ್ಪ ಪೂಜಾರಿ, ಗಣೇಶ್ ಬಿನ್ ಅಣ್ಣಿ ಕುಮಾರ್, ಗಣೇಶ್ ಬಿನ್ ಕುಮಾರ್ ಭಂಡಾರಿ, ಪ್ರವೀಣ ಬಿನ್ ನಾರಾಯಣ, ರೋಹಿತ್ ಬಿನ್ ನೊಣಯ್ಯ ವಿರುದ್ಧ ಅತಿವೇಗ, ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಪಾನಮತ್ತರಾಗಿದ್ದ ನಾಲೈದು ಯುವಕರು, ಕೆಸರಿನಲ್ಲಿ ಬೈಕ್‌ಗಳನ್ನು 50ಕ್ಕೂ ಹೆಚ್ಚು ಬಾರಿ ಓಡಿಸಿ ರಂಪಾಟ ಮಾಡಿದ್ದರು. ನಡೆದು ಸಾಗುತ್ತಿದ್ದ ಪ್ರವಾಸಿಗರ ಮೇಲೆಯೂ ಕೆಸರು ಚಿಮ್ಮಿಸಿ ಹುಚ್ಚಾಟ ಮೆರೆದರು.

ಅರ್ಧ ಗಂಟೆಗೂ ಹೆಚ್ಚು ಕಾಲ ಹಿಂದೆ ಮುಂದೆ ತಿರುಗಿಸಿ ಓಡಿಸಿದ್ದರು. ಪೊಲೀಸರಾಗಲಿ, ಅರಣ್ಯ ಇಲಾಖೆ ಅಧಿಕಾರಿಗಳೂ ಸ್ಥಳದಲ್ಲಿ ಇರಲಿಲ್ಲ. ಬೈಕ್ ಸವಾರರ ಹುಚ್ಚಾಟದಿಂದ ನಡೆದು ಸಾಗುತ್ತಿದ್ದ ಪ್ರವಾಸಿಗರು ಮುಜುಗರ ಅನುಭವಿಸಿದರು.

ಬಳಿಕ ಸ್ಥಳೀಯರು ಗಮನಿಸಿ ಬೈಕ್‌ಗಳನ್ನು ಅಡ್ಡಗಟ್ಟಿ ಹುಚ್ಚಾಟ ತಡೆದರು. ಪೊಲೀಸರಿಗೂ ಸುದ್ದಿ ಮುಟ್ಟಿಸಿ ಬೈಕ್ ಸವಾರರ ವಿರುದ್ಧ ಕ್ರಮ ತಿಳಿಸಿದರು. ಕೈಗೊಳ್ಳುವಂತೆ ಒತ್ತಾಯಿಸಿದರು.

ರಾಣಿಝರಿ ವೀಕ್ಷಣಾ ಸ್ಥಳಕ್ಕೆ ಒಂದು ಕಿಲೋ ಮೀಟ‌ರ್ ದೂರದಲ್ಲೇ ರಸ್ತೆ ಹಾಳಾಗಿದ್ದು, ಕಾರುಗಳನ್ನು ನಿಲ್ಲಿಸಿ ಜನ ನಡೆದೇ ಸಾಗುತ್ತಾರೆ. ನಡೆದು ಸಾಗುವ ರಸ್ತೆಯನ್ನು ಬೈಕ್ ಸವಾರರು ಇನ್ನಷ್ಟು ಹಾಳು ಮಾಡುತ್ತಿದ್ದಾರೆ.

ಈ ರೀತಿಯ ಬೈಕ್ ಸವಾರರು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಪೊಲೀಸರು ಸ್ಥಳದಲ್ಲೇ ನಿಂತು ಈ ಹುಚ್ಚಾಟ ನಿಯಂತ್ರಿಸಬೇಕು ಕೊಟ್ಟಿಗೆಹಾರದ ಸುಜಯ್ ಒತ್ತಾಯಿಸಿದರು.