ಹಾಸನ, ಮೇ 28, 2025: ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದ ಹೇಮಾವತಿ ನದಿಗೆ ಒಳಹರಿವು ಹೆಚ್ಚಿದ್ದು, ಜಿಲ್ಲೆಯಾದ್ಯಂತ ರಸ್ತೆ ಸಂಪರ್ಕ ಕಡಿತ, ಮನೆ ಕುಸಿತ, ವಿದ್ಯುತ್ ಕಡಿತ ಸಮಸ್ಯೆಗಳು ಕಾಡುತ್ತಿವೆ.
ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ
ಹಾಸನ ಜಿಲ್ಲೆಯ ಜೀವನದಿಯಾದ ಹೇಮಾವತಿ ನದಿಗೆ ಭಾರೀ ಮಳೆಯಿಂದಾಗಿ ಒಳಹರಿವು ಗಣನೀಯವಾಗಿ ಹೆಚ್ಚಳವಾಗಿದೆ. ಒಂದೇ ದಿನದಲ್ಲಿ 4,293 ಕ್ಯೂಸೆಕ್‌ನಷ್ಟು ಒಳಹರಿವು ಹೆಚ್ಚಿದ್ದು, ಪ್ರಸ್ತುತ ಜಲಾಶಯಕ್ಕೆ 22,105 ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ. 37.103 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಸದ್ಯ 22.478 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯದ ನೀರಿನ ಮಟ್ಟ 2904.15 ಅಡಿಗಳಾಗಿದೆ. ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳಾಗಿದ್ದು, 3,225 ಕ್ಯೂಸೆಕ್‌ನಷ್ಟು ನೀರು ಹೊರಹರಿವಾಗುತ್ತಿದೆ.
ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ
ಸಕಲೇಶಪುರ ತಾಲ್ಲೂಕಿನ ಬಿಸಿಲೆ ರಸ್ತೆಯಲ್ಲಿ ಬಾರಿ ಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿಗಳೊಂದಿಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ಬಿಸಿಲೆ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ.
ಮನೆ ಕುಸಿತ: ಕುಟುಂಬ ಬೀದಿಗೆ
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಲಲಿತಾ-ಸುಬ್ರಮಣ್ಯ ಎಂಬುವವರಿಗೆ ಸೇರಿದ ವಾಸದ ಮನೆ ಭಾರಿ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಈ ಘಟನೆಯಿಂದ ಕುಟುಂಬವು ಬೀದಿಗೆ ಬಿದ್ದಿದ್ದು, ಉಳಿದಿರುವ ಗೋಡೆಯನ್ನು ರಕ್ಷಿಸಲು ಟಾರ್ಪಲ್ ಮುಚ್ಚಿ ಪರದಾಟ ನಡೆಸುತ್ತಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸೇತುವೆ ಮೇಲೆ ನೀರು: ಗ್ರಾಮಗಳ ಸಂಪರ್ಕ ಕಡಿತ
ಸಕಲೇಶಪುರ ತಾಲ್ಲೂಕಿನ ಬಾಣಗೇರಿ ಗ್ರಾಮದ ಬಳಿಯ ಸೇತುವೆ ಮೇಲೆ ಬಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಬಾಣಗೇರಿ-ಹೆತ್ತೂರು-ಬ್ಯಾಕರವಳ್ಳಿ-ವಣಗೂರು ಕೂಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ.