ಹಂಗರಹಳ್ಳಿ ಮೇಲ್ಸೇತುವೆ ಬದಲು ರೈಲ್ವೆ ಲೆವೆಲ್ ಕ್ರಾಸಿಂಗ್ ಓಪನ್!

ಹಾಸನ: ಮೈಸೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾರ್ಯ ಸದ್ಯಕ್ಕೆ ಮುಕ್ತಾಯವಾಗುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮರು ಸ್ಥಾಪಿಸಿದೆ. ಇದರಿಂದ ಸುತ್ತುಬಳಸಿನ ಹಾದಿ ಸವೆಸಿ ಸುಸ್ತಾಗಿದ್ದ ಸಾರ್ವಜನಿಕರು ನಿಟ್ಟುಸಿಬಿಟ್ಟಿದ್ದಾರೆ.

ನಿರ್ಮಾಣವಾದ ಮೂರು ವರ್ಷಗಳಲ್ಲಿ ಐದಾರು ಬಾರಿ ಕುಸಿತವಾಗಿದ್ದ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿಗಾಗಿ ಕಳೆದ ಡಿಸೆಂಬರ್ ನಲ್ಲಿ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಎಲ್ಲ ವಾಹನಗಳೂ ಪಡುವಲಹಿಪ್ಪೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿತ್ತು.

ಕಿರಿದಾದ ಸುತ್ತುಬಳಸಿನ ಹಾದಿಯಲ್ಲಿ ಸಂಚರಿಸಿ ಪ್ರಯಾಣಿಕರು ಬೇಸತ್ತಿದ್ದರು. ವಿದ್ಯಾರ್ಥಿಗಳು, ನೌಕರರು ನಿತ್ಯ ಹಾಸನ-ಹೊಳೆನರಸೀಪುರ ನಡುವೆ ಇಪ್ಪತ್ತು ನಿಮಿಷದ ಹೆಚ್ಚುವರಿ ಪ್ರಯಾಣದ ಅವಧಿಯಿಂದ ಹೈರಾಣಾಗಿದ್ದರು.

ಡಿಸೆಂಬರ್ ನಲ್ಲಿ ನಾಲ್ಕು ತಿಂಗಳ ಕಾಲ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆ ಅವಧಿ ಮುಗಿದರೂ ದುರಸ್ತಿ ಕೆಲಸ ಮುಕ್ತಾಯ ಆಗಿರಲಿಲ್ಲ.

ಹೀಗಾಗಿ  ರೈಲ್ವೆ ಇಲಾಖೆ ಸಾರ್ವಜನಿಕ ವಲಯದ ಆಕ್ರೋಶದಿಂದ ಬಚಾವಾಗಲು ಈ ಹಿಂದೆ ಇದ್ದ ರೈಲ್ವೆ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮರು ಸ್ಥಾಪಿಸಿದೆ. ಹೀಗಾಗಿ ರೈಲು ಸಂಚಾರದ ಅವಧಿಯಲ್ಲಿ ರೈಲ್ವೆ ಗೇಟ್ ಕಾಯುವುದರ ಹೊರತುಪಡಿಸಿ ಸುಗಮ ಸಂಚಾರ ಸಾಧ್ಯವಾಗಲಿದೆ.