ಹಾಸನ: ಸಂಸದ ಶ್ರೇಯಸ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ದಿಶಾ ಸಮಿತಿ ಸಭೆ ಆರಂಭವಾಗಿದೆ.
ಅಧಿಕಾರಿಗಳ ವಿರುದ್ಧ ಶ್ರೇಯಸ್ ಪಟೇಲ್ ಗರಂ:
ಸಭೆಯ ಆರಂಭದಲ್ಲೇ, ಜಿಲ್ಲೆಯಲ್ಲಿನ ಲೋಕಾಯುಕ್ತ ದಾಳಿಗಳನ್ನು ಪ್ರಸ್ತಾಪಿಸಿದ ಸಂಸದ ಅಧಿಕಾರಿಗಳ ವಿರುದ್ಧ ಗರಂ ಆದರು.
“ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಲೋಕಾಯುಕ್ತ ದಾಳಿ ನಡೆಯುತ್ತಿದೆ. ಲಂಚ ಪಡೆಯುವಾಗ ಅಧಿಕಾರಿಗಳು ಸಿಕ್ಕಿಬೀಳುತ್ತಿದ್ದಾರೆ, ಇದರಿಂದ ಇಡೀ ರಾಜ್ಯ ನಮ್ಮ ಜಿಲ್ಲೆಯತ್ತ ಗಮನ ಹರಿಸಿದೆ,” ಎಂದು ಅವರು ಕಿಡಿಕಾರಿದರು.
ಅಧಿಕಾರಿಗಳಿಗೆ ಎಚ್ಚರಿಕೆ:
ಸಂಸದರು ಸಭೆಯಲ್ಲಿ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದರು, “ಹಾಸನ ಜಿಲ್ಲೆ ಮರ್ಯಾದೆಯನ್ನು ಕಳೆದುಕೊಳ್ಳುವ ಕೆಲಸ ಮಾಡಬೇಡಿ. ಇಡೀ ಜಿಲ್ಲಾಡಳಿತದ ಗೌರವ ನಿಮ್ಮ ಕೈಯಲ್ಲಿದೆ. ನಿಮ್ಮ ಕೆಳಮಟ್ಟದ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ. ಲಂಚಕೋರರನ್ನು ನಿಯಂತ್ರಣದಲ್ಲಿಟ್ಟುಕೊಂಡು ಇನ್ಮುಂದೆ ಇಂತಹ ಘಟನೆಗಳ ಅವಕಾಶ ನೀಡಬೇಡಿ,” ಎಂದರು
ಕಳೆದ ಒಂದು ತಿಂಗಳಲ್ಲಿ ನಾಲ್ವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಡಿಡಿಪಿಐ, ನಗರಸಭೆ ಆಯುಕ್ತರು ಸೇರಿದಂತೆ ನಾಲ್ವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಸಂಸದರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ನಮ್ಮನ್ನು ಬೇರೆಡೆ ಪ್ರಶ್ನಿಸುವ ಪರಿಸ್ಥಿತಿ ಉಂಟಾಗಬಾರದು” ಎಂದು ಶ್ರೇಯಸ್ ಪಟೇಲ್ ತೀಕ್ಷ್ಣವಾಗಿ ಸೂಚಿಸಿದರು.
ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಜೊತೆಗೆ, ಪ್ರಾಮಾಣಿಕತೆಯಿಂದ ಜಿಲ್ಲಾ ಅಭಿವೃದ್ಧಿಗೆ ತಮ್ಮಗೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿಇಓ ಬಿ.ಆರ್. ಪೂರ್ಣಿಮಾ, ಎಡಿಸಿ ಕೆ.ಟಿ. ಶಾಂತಲಾ ಮತ್ತು ಎಎಸ್‌ಪಿ ಭಾಗಿಯಾಗಿದ್ದಾರೆ.