ಹಾಸನ,ಮಾ.4: ನಗರದ 80 ಅಡಿ ರಸ್ತೆ ಮತ್ತು ರಿಂಗ್ ರಸ್ತೆಯಲ್ಲಿ ವೀಲ್ಹಿಂಗ್ ಪುಂಡರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಾಕಿಂಗ್ ಮಾಡಲು ಬರುವ ನಾಗರಿಕರು ಜೀವನ ಭಯದಿಂದ ವಾಕಿಂಗ್ ನಿಲ್ಲಿಸಿರುವುದು ಕಳವಳ ಮೂಡಿಸಿದೆ.
ಇನ್ಸ್ಟಾಗ್ರಾಂನಲ್ಲಿ “ವೀಲರ್ಸ್ ಕ್ಲಬ್” ಹೆಸರಿನಲ್ಲಿ ಖಾತೆ ತೆರೆದು, ಅಲ್ಲಿ ತಾವು ಮಾಡುತ್ತಿರುವ ಅಪಾಯಕಾರಿ ವೀಲ್ಹಿಂಗ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಯುವಕರ ಗುಂಪು ಸಾರ್ವಜನಿಕರ ಕಿರುಕುಳಕ್ಕೆ ಕಾರಣವಾಗುತ್ತಿದೆ. ಹೆಚ್ಚುವರಿಯಾಗಿ, ಪ್ರತಿನಿತ್ಯ ವಾಹನ ದಟ್ಟಣೆ ಇರುವ ರಸ್ತೆಗಳ ಮೇಲೆ ಅವ್ಯಾಹತವಾಗಿ ವೀಲ್ಹಿಂಗ್ ಮಾಡುತ್ತಾ, ಇತರ ವಾಹನ ಸವಾರರು ಮತ್ತು ಪಾದಚಾರಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ.
ಇದರಿಂದ ಕೋಪಗೊಂಡ ಸಾರ್ವಜನಿಕರು, ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಟ್ರಾಫಿಕ್ ಪೊಲೀಸರು ಕೇವಲ ದಂಡ ವಸೂಲಿಗೆ ಮಾತ್ರ ಸೀಮಿತರಾಗಿದ್ದಾರೆ. ವೀಲ್ಹಿಂಗ್ ಪುಂಡರನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ,” ಎಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸರು ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವ ಬೆನ್ನಲ್ಲೇ, ನಗರ ಪೊಲೀಸರು ಈ ಅಬ್ಬರಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.