ಮಳೆ ಆರ್ಭಟದ ನಡುವೆಯೂ ಕಾಡಾನೆ ದಾಂದಲೆ: ಬೆಳೆ ನಷ್ಟ

ಹಾಸನ, ಮೇ 30, 2025: ಸಕಲೇಶಪುರ ತಾಲ್ಲೂಕಿನ ಕಟ್ಟೆಮನೆ ಮತ್ತು ಮರ್ಜನಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ.

ಮಳೆಯ ನಡುವೆಯೂ ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡ ಎರಡು ಸಲಗಗಳು ಕಾಫಿ, ಬಾಳೆ ಮತ್ತು ಅಡಿಕೆ ಗಿಡಗಳನ್ನು ನೆಲಕ್ಕಚ್ಚಿಸಿವೆ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಈ ಗಜಪಡೆ, ವಾಸದ ಮನೆಗಳ ಸಮೀಪದವರೆಗೂ ತಿರುಗಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಧಾವಿಸಿದ್ದಾರೆ. ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಸೂಚಿಸಲಾಗಿದೆ.