ಅಪ್ಪನ‌ ಕೊಲೆಗಾರನನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆಗೈದ ಮಗ; ದಡದಹಳ್ಳಿ ತಂಟೆಕೋರ ವೃದ್ಧನ ಹತ್ಯೆ ಪ್ರಕರಣ ಭೇದಿಸಿದ ಸಿಪಿಐ ವಸಂತ್ ತಂಡ

ಹಾಸನ: ಅರಕಲಗೂಡು ತಾಲೂಕು ದಡದಹಳ್ಳಿಯಲ್ಲಿ ನಿನ್ನೆ ನಡೆದಿದ್ದ ವೃದ್ದ ನಿರ್ವಾಣಪ್ಪನ ಬರ್ಬರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಕೊಲೆಯ ಹಿಂದೆ ಅಮಾಯಕ ತಂದೆಯ ಕೊಲೆಗೆ ಮಗ ಪ್ರತೀಕಾರ ತೀರಿಸಲು ಹತ್ಯೆ ನಡೆಸಿದ ಕತೆಯೂ ತೆರೆದುಕೊಂಡಿದೆ.

ದಡದಹಳ್ಳಿ ಗ್ರಾಮದ ಮೂರ್ತಿ ಅಲಿಯಾಸ್ ಗುಂಡ ಬಂಧಿತನಾಗಿರುವ ಹತ್ಯೆ ಪ್ರಕರಣದ ಆರೋಪಿ.

ಅಪ್ಪನ ಹತ್ಯೆಗೆ ಮಗನ ಪ್ರತೀಕಾರ:
ಸಣ್ಣಪುಟ್ಟ ಕಾರಣಕ್ಕೆ ಒಡಹುಟ್ಟಿದವರ ವಿರುದ್ಧವೇ ಹಗೆ ಸಾಧಿಸುತ್ತಿದ್ದ ನಿರ್ವಾಣಪ್ಪ ದುಷ್ಟತನ‌ ಮೈಗೂಡಿಸಿಕೊಂಡಿದ್ದ.

2011 ರಲ್ಲಿ ತನ್ನ ಸಹೋದರನ ಮೇಲೆ ಕೊಲೆ ಆರೋಪ ಹೊರಿಸಲು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಲಕ್ಕಪ್ಪ ಎಂಬಾತನನ್ನು ಕೊಲೆ ಮಾಡಿದ್ದ ನಿರ್ವಾಣಪ್ಪ ನಂತರ ಸಹೋದರನ ಮನೆಯ ಕಾಂಪೌಂಡ್ ಒಳಗೆ ಮೃತದೇಹ ಎಸೆದಿದ್ದ.

ಪೊಲೀಸರ ತನಿಖೆಯಲ್ಲಿ ನಾಟಕ ಬಯಲಾಗಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ವೃದ್ಧ ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಡದಹಳ್ಳಿ ಗ್ರಾಮದಲ್ಲೇ ವಾಸವಾಗಿದ್ದ ಕೊಲೆಯಾಗಿದ್ದ ಲಕ್ಕಪ್ಪನ ಮಕ್ಕಳ ಭೀತಿಯಿಂದ ನಿರ್ವಾಣಪ್ಪ, ಗ್ರಾಮಕ್ಕೆ ಬಾರದೆ ಸಮೀಪದ ಮಲ್ಲಿಪಟ್ಟಣ ಗ್ರಾಮದಲ್ಲಿ ವಾಸವಾಗಿದ್ದ.

ನಿನ್ನೆ ಮಧ್ಯಾಹ್ನ ತನ್ನ ತಂದೆಯ ಮರಣ ಪ್ರಮಾಣ ಪತ್ರ ಪಡೆಯಲು ದಡದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದ ನಿರ್ವಾಣಪ್ಪನಿಗೆ ದಿಢೀರ್ ಎದುರಾದ ಲಕ್ಕಪ್ಪನ ಮಗ ಮೂರ್ತಿ ಅಲಿಯಾಸ್ ಗುಂಡ, ಹದಿಮೂರು ವರ್ಷಗಳ ಹಿಂದೆ ತನ್ನ ತಂದೆಯ ಕೊಲೆಯನ್ನು ಕೊಲೆ ಮಾಡಿದ್ದಾತನನ್ನು ಹಾಡಹಗಲೇ ಗ್ರಾಮದ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ನಿರ್ವಾಣಪ್ಪನ ಜೀವ ತೆಗೆದು ಪ್ರತೀಕಾರ ಹೇಳಿದ್ದನು.

ಈ ದೃಶ್ಯ ಕಂಡಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಪಿಐ ಕೆ.ಎಂ.ವಸಂತ್ ನೇತೃತ್ವದ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ.

ಕೊಲೆ ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ಎಸ್‌.ಪಿ. ಮೊಹಮದ್ ಸುಜೀತಾ, ಎಎಸ್‌ಪಿ ಶಾಲೂ, ಅರಕಲಗೂಡು ಸಿಪಿಐ ಕೆ.ಎಂ.ವಸಂತ್ ಭೇಟಿ ನೀಡಿ ಚುರುಕಾಗಿ ತನಿಖೆ ಆರಂಭಿಸಿದ್ದರು.