ಸಕಲೇಶಪುರ: ಮಳೆಯಲ್ಲಿ ನೆನೆದು ಸ್ನಾಯುಗಳು ಮರಗಟ್ಟಿ ಸಾವಿನ ಮನೆಯ ಬಾಗಿಲು ತಟ್ಟುತ್ರಿದ್ದ ಮನೆ ತೊರೆದ ವೃದ್ದೆಯೊಬ್ಬರನ್ನು ಪೋಲಿಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.
ಹಾಸನ ತಾಲೂಕು ಹಂಚಿಹಳ್ಳಿ ಗ್ರಾಮದವರು ಎನ್ನಲಾದ ಕಾಮಾಕ್ಷಿ ಎಂಬ ವೃದ್ದೆ ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಭಿಕ್ಷೆ ಬೇಡಿ, ರಾತ್ರಿ ವೇಳೆ ಅಂಗಡಿಗಳ ಮುಂಭಾಗದಲ್ಲಿ ಮಲಗುತ್ತಿದ್ದರು.
ಆದರೆ, ಬೆಚ್ಚನೆಯ ಆಹಾರ, ಹಾಸಿಗೆಯ ಆರೈಕೆ ಬಯಸುವ ವಯಸ್ಸಿನ ವೃದ್ಧೆ ತೆರೆದ ಸ್ಥಳದಲ್ಲಿ ಮಲಗಿ, ದಿನವಿಡೀ ಮಳೆಯಲ್ಲಿ ತೋಯ್ಯುತ್ತಾ ಭಿಕ್ಷೆ ಬೇಡುತ್ತಿದ್ದರು. ಆದರೆ ಇಂದು ಮಳೆಗಾಲದ ಚಳಿ ತಾಳಲಾರದೆ ಅಜಾದ್ ರಸ್ತೆಯ ಅಂಗಡಿಯೊಂದರ ಮುಂಭಾಗ ಕಾಲುಗಳ ಸ್ನಾಯುಗಳು ಮರಗಟ್ಟಿ ಕುಳಿತಲ್ಲೆ ಕುಳಿತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೋಲಿಸರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ 112 ಸಿಬ್ಬಂದಿ ಹರೀಶ್ ಹಾಗೂ ಮಂಜುನಾಥ್ 108 ಅಂಬುಲೆನ್ಸ್ ಕರೆಸಿ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.
ಸೂಕ್ತ ಆಹಾರ, ಆರೈಕೆಗಳಿಲ್ಲದೇ ವೃದ್ಧೆ ಬಳಲಿದ್ದು, ಅಸ್ಪತ್ರೆಯಲ್ಲಿನ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ.