ಉದ್ಯಮಿ ಕೃಷ್ಣೇಗೌಡ ಹತ್ಯೆ ಪ್ರಕರಣ; ಪೊಲೀಸರಿಗೆ 5 ತಿಂಗಳುಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿಗಳ ಬಂಧನ

ಹಾಸನ: ಗ್ರಾನೈಟ್ ಉದ್ಯಮಿ ಹಾಗೂ ಮಾಜಿ ಸಚಿವ ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಹತ್ಯೆ ಸಂಬಂಧ ಪ್ರಮುಖ ಆರೋಪಿ ಗಳನ್ನು ಬಂಧಿಸುವಲ್ಲಿ ಕಡೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನದ ಶಂಕರೀಪುರಂ ನಿವಾಸಿ ಯೋಗಾನಂದ, ಚನ್ನರಾಯಪಟ್ಟಣ ತಾಲೂಕು ಹೊಸೂರು ಗೇಟ್‌ನ ಮಂಜುನಾಥ್ ಅಲಿಯಾಸ್ ಅನಿಲ್ ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಬ್ಬೇಗಟ್ಟ ಗ್ರಾಮದ ತೋಟದ ಮನೆಯೊಂದರಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ.

ಘಟನೆ ಹಿನ್ನೆಲೆ:
ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ 2023 ಆ.9 ರಂದು ಮಧ್ಯಾಹ್ನ 1.30 ರ ಸಮಯದಲ್ಲಿ ಕೃಷ್ಣೇಗೌಡ ಅವರನ್ನು ನಗರದ ಕೈಗಾರಿಕಾ ಪ್ರದೇಶದಲ್ಲಿ ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಅದಾದ ಬಳಿಕ ತನಿಖೆ ನಡೆಸಿದ ಪೊಲೀಸರು ಸುಮಾರು ೧೦ ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಮೇಲಿನ ಪ್ರಮುಖ ಆರೋಪಿಗಳು ಸಿಕ್ಕಿರಲಿಲ್ಲ.

ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಲು ಸಿಒಡಿ ರವರ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಕೆ.ತಮ್ಮಯ್ಯ ಹಾಗೂ ವೆಂಕಟೇಶನಾಯ್ಡು ಅವರು, ಬಾಣಾವರ ಪಿಎಸ್‌ಐ ಸುರೇಶ್ ಸಿ.ಎಸ್, ಶ್ರವಣಬೆಳಗೊಳ ಪಿಎಸ್‌ಐ ಶಿವಶಂಕರ್, ಗೊರೂರು ಪಿಎಸ್‌ಐ (ತನಿಖೆ) ಪ್ರಸನ್ನ. ಆರ್ ಅವರ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿದ್ದರು.

ಈ ತಂಡ ಕಾರ್ಯಾಚರಣೆ ಕೈಗೊಂಡು ಸುಮಾರು ಐದು ತಿಂಗಳ ನಂತರ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಹಮದ್ ಸುಜೀತಾ ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಹೀಗಾಗಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ. ಈ ಪೈಕಿ ಆರಂಭದಲ್ಲಿ ಬಂಧನಕ್ಕೆ ಒಳಗಾದ ಕೆಲ ಆರೋಪಿಗಳಿಗೆ ಜಾಮೀನು ಸಿಕ್ಕಿ ಬಿಡುಗಡೆಯಾಗಿದ್ದಾರೆ.

ತಂಡದಲ್ಲಿದ್ದ ಶ್ರವಣಬೆಳಗೊಳ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವೀರಭದ್ರೇಗೌಡ, ಕಿರಣ, ಜಗದೀಶ, ರಾಕೇಶ, ಅನಿಲ್ ಕುಮಾರ, ಜಿಲ್ಲಾ ಪೊಲೀಸ್ ಕಚೇರಿಯ ಪೀರ್‌ಖಾನ್ ಮೊದಲಾದವರ ಕಾರ್ಯವೈಖರಿಗೆ ಎಸ್ಪಿ ಹಾಗೂ ಎಎಸ್ಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.