ಹಾಸನ, ಡಿ.30: ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಬಿಗಿ ಕ್ರಮಗಳನ್ನು ಜಾರಿಗೊಳಿಸಿದೆ.
ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಪೊಲೀಸರು, ಹೋಂಗಾರ್ಡ್ಸ್, ಕೆಎಸ್‌ಆರ್‌ಪಿ ಮತ್ತು ಡಿಆರ್ ಪಡೆಗಳನ್ನು ಹೊಸವರ್ಷಾಚರಣೆ ಸಮಯದಲ್ಲಿ ಗಸ್ತು ಹಾಗೂ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಭ್ರಮ ಆಚರಣೆ ವೇಳೆ ಅನೈತಿಕ ಚಟುವಟಿಕೆಗಳು, ಅಪಘಾತಗಳನ್ನು ನಿಯಂತ್ರಿಸಲು ಈಗಾಗಲೇ ಪಾನಮತ್ತ ಚಾಲಕರ ವಿರುದ್ಧ ‘ಡ್ರಂಕ್ ಅಂಡ್ ಡ್ರೈವ್’ ಕೇಸ್ ದಾಖಲಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ.
ವಾಹನಗಳ ವೇಗ ನಿಯಂತ್ರಣಕ್ಕಾಗಿ ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಡಿ.31 ರಂದು ವಿಶೇಷ ಗಸ್ತು ಕಾರ್ಯಾಚರಣೆ ನಡೆಯಲಿದೆ.
ಹೋಟೆಲ್, ರೆಸಾರ್ಟ್ ಮಾಲೀಕರಿಗೆ ಸೂಚನೆ:
ಹೊಸ ವರ್ಷಾಚರಣೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಸಮಾರಂಭ ನಿರ್ವಹಿಸಬೇಕು.
ಹೋಟೆಲ್, ರೆಸಾರ್ಟ್, ಹಾಗೂ ಹೋಂ ಸ್ಟೇ ಮಾಲೀಕರೊಂದಿಗೆ ಈಗಾಗಲೇ ಸಭೆ ನಡೆಸಿ, ಪೊಲೀಸ್ ನಿರ್ದೇಶಗಳಿಗೆ ಅನುಗುಣವಾಗಿ ಆಚರಣೆಯನ್ನು ರೂಪಿಸಬೇಕೆಂದು ಸೂಚಿಸಲಾಗಿದೆ. ಯಾವುದೇ ಕಾರ್ಯಕ್ರಮ ನಡೆಸಲು ಪೊಲೀಸರು ಮತ್ತು ಸಂಬಂಧಿಸಿದ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ:
ಹೆದ್ದಾರಿಗಳಲ್ಲಿ ವೀಲ್ಹಿಂಗ್, ಅಪಘಾತಗಳು, ಮತ್ತು ಅತಿವೇಗ ನಿಯಂತ್ರಣಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು 24 ಗಂಟೆಗಳ ಗಸ್ತು ನಡೆಸಲಿದ್ದು, ಹೊಸ ವರ್ಷದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ನಿರತವಾಗಲಿವೆ ಎಂದು ತಿಳಿಸಿದರು.
ಪೊಲೀಸರು ಹಾಗೂ ಅಬಕಾರಿ ಇಲಾಖೆ ಜಂಟಿಯಾಗಿ ಹೊಸ ವರ್ಷಾಚರಣೆಗೆ ಸಮನ್ವಯ ಸಭೆ ನಡೆಸಿದ್ದು, ಜಿಲ್ಲೆಯ ಜನರು ಜವಾಬ್ದಾರಿಯುತವಾಗಿ ಉತ್ಸವವನ್ನು ಆಚರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.