ಜಿ.ದೇವರಾಜೇಗೌಡ ಪೊಲೀಸ್ ಕಸ್ಟಡಿ ಅವಧಿ ಒಂದು ದಿನ ವಿಸ್ತರಣೆ

ಹಾಸನ : ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸ್ ಕಸ್ಟಡಿ ಮತ್ತೊಂದು ದಿನ ವಿಸ್ತರಣೆಯಾಗಿದೆ.

ಮೇ.14 ರಂದು ನ್ಯಾಯಾಂಗ ಬಂಧನದಲ್ಲಿದ್ದ ದೇವರಾಜೇಗೌಡ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಹೊಳೆನರಸೀಪುರ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಪ್ರಾಸಿಕ್ಯೂಷನ್ ಪರ ವಕೀಲರು ದೇವರಾಜೇಗೌಡ ಅವರ ಹೆಚ್ಚಿನ ವಿಚಾರಣೆಗಾಗಿ ಮತ್ತೊಂದು ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಪೊಲೀಸರ ಮನವಿಯಂತೆ ದೇವರಾಜೇಗೌಡ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದ್ದು, ನಾಳೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚಿಸಿದೆ.

ಅತ್ಯಾಚಾರ ಆರೋಪದಲ್ಲಿ ಮೇ.11 ರಂದು ದೇವರಾಜೇಗೌಡ ಬಂಧಿಸಿದ್ದ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಮೂರು ದಿನಗಳಿಂದ ಅವರ ವಿಚಾರಣೆ ನಡೆಸಿದ್ದು, ಮತ್ತೊಂದು ದಿನ ಅವರು ವಿಚಾರಣೆಗೊಳಪಡಲಿದ್ದಾರೆ‌.