ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಐ ನೆಟ್ ಮೇಲೆ ದಾಳಿ ಮಾಡಿದ ರೌಡಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ; ಕಿಡಿಕಾರಿದ ಪ್ರಜ್ವಲ್ ರೇವಣ್ಣ

ವಿಜಯಕುಮಾರ್‌ಗೆ ನ್ಯಾಯ ಸಿಗುವ‌ವರೆಗೂ ಹೋರಾಡುತ್ತೇನೆ.

ಹಾಸನ: ಐನೆಟ್ ವಿಜಯಕುಮಾರ್ ಮೇಲೆ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಒತ್ತಡಕ್ಕೆ ಸಿಲುಕಿದ್ದಾರೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಮೀಲಾಗಿದ್ದಾರೆ ಎಂದು ಸಂಸದ, ಹಾಸನ‌‌‌ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆರೋಪಿಸಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ಮಂಚಿಗನಹಳ್ಳಿ ಗ್ರಾಮದಲ್ಲಿ ಅವರು ಮಾತನಾಡಿದರು.

ಕೆಲವರು ರಾತ್ರೋರಾತ್ರಿ ಹಾಸನದಿಂದ ಪೊಲೀಸರಿಗೆ ಫೋನ್ ಮಾಡಿಸಿದ್ದಾರೆ.
ವಿಜಿಯವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು.

ರಾತ್ರಿ ಸ್ವಲ್ಪ ಚೇತರಿಸಿಕೊಂಡ ಮೇಲೆ ಮತ್ತೆ ಹೇಳಿಕೆ ಕೊಟ್ಟಿದ್ದಾರೆ. ಅವರ ಮೇಲೆ ಮಾರಕಾಸ್ತ್ರ ಬಳಸಿ ಹಲ್ಲೆ ಮಾಡಿದ್ದಾರೆ, ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ, ಅಂಗಡಿ ಧ್ವಂಸಗೊಳಿಸಿದ್ದಾರೆ. ಅವರಿಗಿನ್ನೂ ಮದುವೆಯಾಗಿಲ್ಲ, ಹಿಂದುತ್ವಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರ ಮನೆಯಲ್ಲಿ ಏನೂ ಇಲ್ಲ, ಅವರ ಬಳಿ ಆಸ್ಪತ್ರೆಗೆ ಕಟ್ಟಲೂ ದುಡ್ಡಿಲ್ಲ‌ ಎಂದರು.

ಬಹಳ ಒಳ್ಳೆಯ ವ್ಯಕ್ತಿತ್ವದವರು, ಅಂತಹವರ ಮೇಲೆ ಹಲ್ಲೆ ಮಾಡಿರುವವರ ಮನಸ್ಥಿತಿ ಹೇಗಿರಬೇಕು? ಅಂತಹ ಕಿಡಿಗೇಡಿಗಳ ಮೇಲೆ ಪೊಲೀಸರು ಕಠಿಣವಾದ ಕ್ರಮ ಜರುಗಿಸಬೇಕಿತ್ತು. ಆದರೆ ಪೊಲೀಸರು ವಿಫಲರಾಗಿದ್ದಾರೆ.

ರಾಜಕೀಯ ಒತ್ತಡಕ್ಕೆ ಮಣಿದು ರೌಡಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಅಡಿಷನಲ್ ಕಂಪ್ಲೆಂಟ್ ಆಧರಿಸಿ ಆರೋಪಿಗಳ ಮೇಲೆ 307 ಕೇಸ್ ದಾಖಲಿಬೇಕು. ವಿಜಿಯವರ ಸಾವಾಗಿದ್ದರೆ ಅವರ ತಂದೆ-ತಾಯಿಯನ್ನು ಯಾರು ನೋಡಿಕೊಳ್ಳುತ್ತಿದ್ದರು?ಮಂತ್ರಿಗೆ ಫೋನ್ ಮಾಡಿ ಹಲ್ಲೆ ಮಾಡಿವವರನ್ನು ಬಿಡಿಸುತ್ತಾರೆ.

ಇದರಲ್ಲಿ ಯಾ‌‌‌‌ರ‌್ಯಾರು ಇದ್ದಾರೆ ಅನ್ನುವುದು ತನಿಖೆಯಾಗಬೇಕು, ವಿಜಯಕುಮಾರ್‌ಗೆ ನ್ಯಾಯ ಸಿಗುವ‌ವರೆಗೂ ಹೋರಾಡುತ್ತೇನೆ.
ನ್ಯಾಯ ಕೊಡಿಸುವುದು ಪೊಲೀಸರ ಜವಾಬ್ದಾರಿ.‌ ಜನಪರ ಕೆಲಸ ಮಾಡುವ ಖಾಕಿ ಯಾರೋ ಒಬ್ಬರ ಗುಲಾಮರಾಗಬಾರದು. ದಯವಿಟ್ಟು ಅವರಿಗೆ ನ್ಯಾಯ ಕೊಡಿಸಿ ಎಂದರು.