ಬಾಲಕಿ ಕುತ್ತಿಗೆ ಸೀಳಲು ಫ್ಲಿಪ್ ಕಾರ್ಟ್ ನಲ್ಲಿ ಚಾಕು ಖರೀದಿಸಿದ್ದ ಹಂತಕ!

ಬಾಲಕಿಯನ್ನು ಪ್ರೀತಿಸುತ್ತಿದ್ದ ಆತ ತನಗೆ ಮದುವೆ‌ ಮಾಡಿಕೊಡುವಂತೆ ಪೋಷಕರ ಮೂಲಕ ಕೇಳಿಸಿದ್ದ.

ಹಾಸನ: ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಸೋಮವಾರ ಶಾಲೆಯಿಂದ ಮರಳುತ್ತಿದ್ದ ಅಪ್ತಾಪ್ತೆಯ ಕತ್ತು ಸೀಳಿ ಹತ್ಯೆ ಮಾಡಿದ ಕೊಲೆಗಾರ ತಾನೂ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಹತ್ಯೆಗೆ ಯುವಕನ ಹತಾಶೆಯೇ ಕಾರಣವಾಯಿತಾ ಎನ್ನುವ ಪ್ರಶ್ನೆ ಮೂಡಿದೆ.

ಬೆಳಗುಂಬ ಗ್ರಾಮದ 16 ವರ್ಷದ ಬಾಲಕಿಯನ್ನು ಜಾಡಘಟ್ಟ ಗ್ರಾಮದ ಶರತ್ (20) ಹತ್ಯೆ ಮಾಡಿ ನಂತರ ತಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಸಂಬಂಧ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಆತ್ಮಹತ್ಯೆ ಮಾಡಿಕೊಂಡಿರುವ ಯುವಕನೇ ಬಾಲಕಿಯನ್ನು ಹತ್ಯೆ ಮಾಡಿರುವುದು ಖಚಿತವಾಗಿದೆ.

ಆತ ಕೊಲೆಗೂ ಮುನ್ನವೇ ಸಂಚು ರೂಪಿಸಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ಎನ್ನುವ ಅಂಶ ತನಿಖೆ ವೇಳೆ ಪತ್ತೆಯಾಗಿದೆ.

ಬಾಲಕಿಯನ್ನು ಕೊಲೆ ಮಾಡಲು ಬಳಸಿದ ಚಾಕುವನ್ನು ಆತ ಎರಡು ದಿನಗಳ ಹಿಂದಷ್ಟೇ ಫ್ಲಿಪ್ ಕಾರ್ಟ್ ನಿಂದ ಖರೀದಿಸಿದ್ದ. ಅರಸೀಕೆರೆಯ ಕಾಲೇಜೊಂದರಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಆತ ಹಾಸ್ಟೆಲ್ ನಲ್ಲಿ ವಾಸವಿದ್ದ.

ಕೊಲೆ ಸಂಚನ್ನು ಕಾರ್ಯರೂಪಕ್ಕಿಳಿಸಲು ಅಂದು ಮಧ್ಯಾಹ್ನ ಹಾಸ್ಟೆಲ್ ನಿಂದ ಬೆಳಗುಂಬಕ್ಕೆ ಬಂದು ಬಾಲಕಿ ಶಾಲೆಯಿಂದ ಹೊರ ಬರುವುದನ್ನು ಕಾದು ಕುಳಿತಿದ್ದ. ಬಾಲಕಿಯ ಸೈಕಲ್ ನ್ನು ಬೈಕ್ ನಲ್ಲಿ ಹಿಂಬಾಲಿಸಿ ಬಂದು ಅಡ್ಡಗಟ್ಟಿದ ಆತ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಆಕೆ ಮೃತಪಟ್ಟ ನಂತರ ಅಲ್ಲಿಂದ ಪರಾರಿಯಾಗಿದ್ದ ಎನ್ನುವುದು ಗೊತ್ತಾಗಿದ್ದು, ಹತ್ಯೆ ಸ್ಥಳದಲ್ಲಿದ್ದ ಶರತ್ ನ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುಂದೆ ನೋಡೋಣ ಅಂದಿದ್ದರು: ಬಾಲಕಿಯ ಪೋಷಕರು ಅಂತರ್ಜಾತಿ ವಿವಾಹವಾಗಿದ್ದು, ತಾಯಿಯ ಕಡೆಯಿಂದ ಶರತ್ ಸಂಬಂಧಿಕನೂ ಆಗಿದ್ದ. ಬಾಲಕಿಯನ್ನು ಪ್ರೀತಿಸುತ್ತಿದ್ದ ಆತ ತನಗೆ ಮದುವೆ‌ ಮಾಡಿಕೊಡುವಂತೆ ಪೋಷಕರ ಮೂಲಕ ಕೇಳಿಸಿದ್ದ.

ಆದರೆ ಬಾಲಕಿಯ ಪೋಷಕರು ಹುಡುಗಿ ಇನ್ನೂ ಚಿಕ್ಕವಳು. ಆಕೆ ಪ್ರಾಪ್ತಳಾದ ನಂತರ ನೋಡೋಣ ಎಂದು ಪ್ರತಿಕ್ರಿಯಿಸಿದ್ದರು. ಇದೆಲ್ಲ ಆಗಿ ತಿಂಗಳುಗಳೇ ಕಳೆದ ನಂತರ ಶರತ್ ಕೊಲೆ ಮಾಡುವಂತಹ ಕ್ರೂರ ನಿರ್ಧಾರ ಕೈಗೊಳ್ಳಲು ಏನು ಕಾರಣವಾಯಿತು ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ.