ಅಪ್ರಾಪ್ತನಿಗೆ ಬೈಕ್ ಕೊಟ್ಟ ಮಾಲೀಕನಿಗೆ 27 ಸಾವಿರ ರೂ. ದಂಡ! ಬಾಲಕನಿಗೆ 25 ವರ್ಷ ಆಗುವ ತನಕ ಲೈಸೆನ್ಸ್ ಕೊಡಬೇಡಿ; ಕೋರ್ಟ್ ಕಠಿಣ ಆದೇಶ

ಟಿ.ನರಸೀಪುರ: ವಯಸ್ಸು ಹದಿನೆಂಟು ಆಗದಿದ್ದರೂ ರಾಜಾರೋಷವಾಗಿ ವಾಹನ ಓಡಿಸುವವರು ಹಾಗೂ ಅಪ್ರಾಪ್ತರೆಂದು ಗೊತ್ತಿ ದ್ದರೂ ಅವರ ಕೈಗೆ ವಾಹನ ನೀಡುವವರಿಗೆ ಇಲ್ಲಿನ ನ್ಯಾಯಾಲಯವೊಂದು ಕಠಿಣ ತೀರ್ಪಿನ ಮೂಲಕ ಬಿಸಿ ಮುಟ್ಟಿಸಿದೆ.

ಅಪ್ರಾಪ್ತನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 27 ಸಾವಿರ ರೂ. ದಂಡ ವಿಧಿಸಿದ್ದಲ್ಲದೆ, ವಾಹನ ಓಡಿಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪ್ರಾಪ್ತನಿಗೆ 25 ವರ್ಷ ಆಗುವವರೆಗೆ ಚಾಲನಾ ತರಬೇತಿ ನೀಡದಂತೆ ಸೂಚಿಸಿ ತೀರ್ಪು ಹೊರಡಿಸಿದೆ.

ಟಿ.ನರಸೀಪುರದ ಜಿಎಫ್‌ಎಂಸಿ ನ್ಯಾಯಾ ಲಯ ಗುರುವಾರ ಇಂಥದೊಂದು ಅಪರೂಪದ ತೀರ್ಪು ನೀಡಿದೆ. ಇತ್ತೀಚೆಗೆ ಟಿ.ನರಸೀಪುರ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಬಾಲಕನೊಬ್ಬ ದ್ವಿಚಕ್ರ ವಾಹನ ಓಡಿಸುತ್ತಿರು ವುದು ಪತ್ತೆಯಾಗಿದ್ದು, ವಾಹನ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಟಿ.ನರಸೀಪುರದ ನ್ಯಾಯಾಲಯವು, ಬಾಲಕನಿಗೆ ವಾಹನ ನೀಡಿದ ವಾಹನ ಮಾಲೀಕ ಟಿ.ನರಸೀಪುರ ತಾಲೂಕು ತ್ರಿವೇಣಿನಗರ ನಿವಾಸಿ ಮಹೇಶ್ ಎಂಬವರಿಗೆ 27 ಸಾವಿರ ರು. ದಂಡ ವಿಧಿಸಿದಲ್ಲದೆ, ಒಂದು ವರ್ಷ ವಾಹನದ ಆರ್.ಸಿ. ಅಮಾನತಿನಲ್ಲಿರಿಸುವಂತೆ ಆದೇಶಿಸಿದೆ. ಜತೆಗೆ, ಬಾಲಕನಿಗೆ 25 ವರ್ಷದವರೆಗೆ ವಾಹನ ಚಾಲನಾ ಪರವಾನಗಿ ನೀಡದಂತೆ ತೀರ್ಪು ನೀಡಿದೆ