ಪೆನ್ ಡ್ರೈವ್ ನಿಂದ ಹಾಸನದಲ್ಲಿ ಸೋಲು, ಪಕ್ಷದ ಮೇಲೂ ಪರಿಣಾಮ: ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್

ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ನೀಡಬೇಕು| ರೇವಣ್ಣ ಕನಸಿನ ಹಾಸನ ಕಾರ್ಗೋ ವಿಮಾನ ನಿಲ್ದಾಣ ಕಾರ್ಯಗತವಾಗಲಿ

ಹಾಸನ: ಪೆನ್‌ಡ್ರೈವ್ ಪ್ರಕರಣ ಜೆಡಿಎಸ್ ಪಕ್ಷದ ಮೇಲೆ ಪರಿಣಾಮ ಬೀರಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋಲಿಗೂ ಪೆನ್‌ಡ್ರೈವ್ ಒಂದು ಕಾರಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯುತ್ತೇವೆ. ಸೋಲಿನ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.

ಮಂಡ್ಯ ಸಂಸದರಾಗಿ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯದ ನಾಲ್ವರು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಪಕ್ಷಕ್ಕೆ ಮತ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ ಎಂದರು.

ರೈತರ ಸಾಲಮನ್ನಾ ಮಾಡಿರುವ, ರೈತರ ಧ್ವನಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ಕೊಡಬೇಕು. ಕುಮಾರಣ್ಣ ತಮ್ಮ ಪರಿಶ್ರಮದಿಂದ ಮೇಕೆದಾಟು, ಮಹಾದಾಯಿ, ಕಾವೇರಿ ಸಮಸ್ಯೆ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಎಚ್.ಡಿ.ರೇವಣ್ಣ ಅವರ ಕನಸಾದ ಹಾಸನದಲ್ಲಿ ಕಾರ್ಗೋ ವಿಮಾನ ನಿಲ್ದಾಣ ನಿರ್ಮಾಣ, ಐಐಟಿ ಹಾಗೂ ಕೈಗಾರಿಕೆಗಳ ಸ್ಥಾಪನೆಯಂತಹ ಅಭಿವೃದ್ಧಿ ನಡೆಯಬೇಕು. ಹಾಸನದಿಂದ ಆಯ್ಕೆಯಾಗಿರುವ ಸಂಸದ ಶ್ರೇಯಸ್‌ಪಟೇಲ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.