ಹಳೇಬೀಡು: ಶಿವಪುರಕಾವಲಿನ ಪ್ರಕೃತಿಯ ಮಡಿಲಿನಲ್ಲಿರುವ ಜೈನರ ಗುತ್ತಿ ಕ್ಷೇತ್ರದಲ್ಲಿ ಶುಕ್ರವಾರ ಮಂತ್ರಘೋಷ, ವಾದ್ಯವೈಭವ ಹಾಗೂ ಸುಶ್ರಾವ್ಯವಾಗಿ ಕೇಳಿ ಬಂದ ಜಿನ ಗಾಯನದೊಂದಿಗೆ ಪಂಚಕಲ್ಯಾಣಕ ಮಹಾ ಮಹೋತ್ಸವ ಆರಂಭವಾಯಿತು.
ಜೈನ ಮುನಿಗಳಾದ ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜ್, ವೀರ ಸಾಗರ ಮುನಿ ಮಹಾರಾಜ್, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ. ಪಂಚಕಲ್ಯಾಣಕ ಮಹೋತ್ಸವಕ್ಕೆ ವಿಧಿ ವಿಧಾನದೊಂದಿಗೆ ಚಾಲನೆ ನೀಡಿದರು.
ಪಂಚಕಲ್ಯಾಣಕದ ಮೊದಲ ದಿನದ ತೀರ್ಥಂಕರರ ಗರ್ಭಕಲ್ಯಾಣಕ ಪೂರ್ವ ಕ್ರಿಯಾ ವಿಧಾನ ಬೆಳಿಗ್ಗೆ. 5 ಗಂಟೆಗೆ ಸುಪ್ರಭಾತ ಮಂಗಳವಾದ್ಯದೊಂದಿಗೆ ಆರಂಭವಾಯಿತು. ಆಚಾರ್ಯ ನಿಯಂತ್ರಣ ಮತ್ತು ಆಚಾರ್ಯ ಶ್ರೀಗಳಿಗೆ ಸಂಘ ಪೂಜೆ ನೆರವೇರಿಸಲಾಯಿತು.
ಪ್ರತಿಷ್ಟಾಚಾರ್ಯ ನಿಯಂತ್ರಣ ಕಂಕಣ ಬಲದೊಂದಿಗೆ ಇಂದ್ರ ಪ್ರತಿಷ್ಠೆ ನೆರವೇರಿಸಲಾಯಿತು. ನಂತರ ಜಿನ ಮಂದಿರ ಗರ್ಭ ಗುಡಿಯ ಜಿನೇಶ್ವರ ಭಗವಂತರಿಗೆ ಅಭಿಷೇಕದೊಂದಿಗೆ ಶಾಂತಿಧಾರೆ ಹಾಗೂ ಘಟಯಾತ್ರೆ ಪೂರ್ಣಗೊಂಡಿತು. ಧ್ವಜಾರೋಹಣ, ಮಂಟಪ ಉದ್ಘಾಟನೆ ಅಖಂಡ ದೀಪ ಸ್ಥಾಪನೆಯೊಂದಿಗೆ,ಜಿನ ವಾಣಿ ಸ್ಥಾಪನೆ ಮಾಡಲಾಯಿತು. ಶಾಂತಿಧಾರ ಮಂಟಪದಲ್ಲಿ ಅರ್ಘ್ಯದೊಂದಿಗೆ ಯಾಗ ಮಂಡಲ ಆರಾಧನೆ ನಡೆಯಿತು.
ಪೀಠ ಯಾತ್ರಾರಾಧನೆ ಲಘು ಶಾಂತಿಕ ಆರಾಧನೆ ಪಂಚಕುಂಭ ವಿನ್ಯಾಸ ಅಂಕುರಾರ್ಪಣಿ, ಬೃಹತ್ ಶಾಂತಿಕಾ ಆರಾಧನೆಯೊಂದಿಗೆ ಶಾಂತಿಕಾ ಹೋಮ ನೆರವೇರಿತು.
ಪ್ರತಿಷ್ಚಾರ್ಯರಾದ ಚಂದ್ರಕಾಂತ್ ಗುಂಡಪ್ಪ ಪಂಡಿತ್ ಇಂಡಿ, ಆನಂದ್ ಉಪಾಧ್ಯೆ ಅಥಣಿ ಕುಂತುನಾಥ್ ಉಪಾಧ್ಯೆ ಒಳ್ಳಿವಡೆ ಪ್ರವೀಣ್ ಪಂಡಿತ್, ಪವನ್ ಪಂಡಿತ್ ಸ್ಥಾನಿಕ ಪುರೋಹಿತ್ ಶೀತಲ ಪಂಡಿತ್ ವಿಧಿ ವಿಧಾನ ನಡೆಸಿದರು.