ಆಪರೇಷನ್ ವಿಕ್ರಾಂತ್ ಎರಡನೇ ದಿನವೂ ವಿಫಲ: ದೈತ್ಯ ಭೀಮನ ದಾಳಿ‌ ಆತಂಕದಿಂದ‌ ಕಾರ್ಯಾಚರಣೆ ಸ್ಥಗಿತ!

ಹಾಸನ, ಮಾರ್ಚ್ : ಬೇಲೂರು ತಾಲೂಕಿನಲ್ಲಿ ಪುಂಡಾನೆ ವಿಕ್ರಾಂತ್‌ನನ್ನು ಸೆರೆಹಿಡಿಯಲು ನಡೆದ “ಆಪರೇಷನ್ ವಿಕ್ರಾಂತ್” ಕಾರ್ಯಾಚರಣೆ ಸತತ ಎರಡನೇ ದಿನವೂ ವಿಫಲಗೊಂಡಿದೆ.

ಅರಣ್ಯ ಇಲಾಖೆಯ ತಂಡ ಇಂದು ಸತತ ಆರು ಗಂಟೆಗಳ ಕಾಲ ಶ್ರಮಿಸಿದರೂ, ವಿಕ್ರಾಂತ್ ಸೆರೆಗೆ ಸಿಗದೆ ತಪ್ಪಿಸಿಕೊಂಡಿದೆ. ಈ ಕಾರ್ಯಾಚರಣೆ ಸ್ಥಳಕ್ಕೆ ದೈತ್ಯ ಕಾಡಾನೆ ಭೀಮನ ಆಗಮನ ಹೊಸ ತೊಡಕು ತಂದಿದ್ದು, ಅರಣ್ಯ ಇಲಾಖೆಗೆ ಹಿನ್ನಡೆ ಉಂಟಾಗಿದೆ.

ಇಂದು ಮಧ್ಯಾಹ್ನದ ನಂತರ ಥರ್ಮಲ್ ಡ್ರೋನ್ ಬಳಸಿ ವಿಕ್ರಾಂತ್‌ನನ್ನು ಪತ್ತೆಹಚ್ಚಲು ಯತ್ನಿಸಿದ ಅರಣ್ಯ ಇಲಾಖೆ, ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲು ಮುಂದಾಗಿತ್ತು. ಆದರೆ, ಸ್ಥಳದಲ್ಲಿ ಇದ್ದ ಇತರ ಮೂರು ಕಾಡಾನೆಗಳ ಜತೆಗೆ ಭೀಮ ಎಂಬ ಕಾಡಾನೆಯ ಆಗಮನವು ಯೋಜನೆಗೆ ಅಡ್ಡಿಯಾಯಿತು.

ಭೀಮನ ಉಪಸ್ಥಿತಿಯಿಂದ ಆತಂಕಗೊಂಡ ಅರಣ್ಯ ಇಲಾಖೆ:

ಭೀಮ ಸಾಕಾನೆಗಳನ್ನು ಕಂಡರೆ ಕಾಳಗಕ್ಕೆ ಇಳಿಯುವ ಭೀತಿಯಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.ಈ ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಜತೆಗೆ ಏಳು ಸಾಕಾನೆಗಳು ಭಾಗವಹಿಸಿದ್ದವು.

ಆದರೆ, ವಿಕ್ರಾಂತ್‌ನ ಚಾಕಚಕ್ಯತೆ ಮತ್ತು ಭೀಮನ ಆಗಮನದಿಂದ ಎರಡು ದಿನಗಳ ಶ್ರಮ ವ್ಯರ್ಥವಾಯಿತು. “ವಿಕ್ರಾಂತ್ ನಮಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ,” ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಹೇಳಿದರು.

ಭೀಮನನ್ನು ದೂರ ಓಡಿಸಿ ವಿಕ್ರಾಂತ್‌ನನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ತೀವ್ರ ಪ್ರಯತ್ನ ನಡೆಸುತ್ತಿದೆ. ಆದರೆ, ಸಾಕಾನೆಗಳು ಭೀಮನ ಭಯದಿಂದ ಬೆದರಿ ಓಡುವ ಸಾಧ್ಯತೆಯೂ ಇದ್ದು, ಕಾರ್ಯಾಚರಣೆಗೆ ಮತ್ತಷ್ಟು ಸವಾಲು ಎದುರಾಗಿದೆ. ಎರಡು ದಿನಗಳ ಕಾಲ ದಣಿದಿರುವ ಸಿಬ್ಬಂದಿ ಮತ್ತು ಸಾಕಾನೆಗಳಿಗೆ ಇದು ಹೊಸ ಪರೀಕ್ಷೆಯಾಗಿದೆ.

ಪ್ರಸ್ತುತ, ಅರಣ್ಯ ಇಲಾಖೆ ಭೀಮನನ್ನು ದೂರಕ್ಕೆ ಸರಿಸುವ “ಸರ್ಕಸ್”ನಲ್ಲಿ ತೊಡಗಿದ್ದು, ವಿಕ್ರಾಂತ್‌ನ ಸೆರೆಗಾಗಿ ಮತ್ತೊಂದು ತಂತ್ರ ರೂಪಿಸುತ್ತಿದೆ.

ಜಾಹೀರಾತು