ಹಾಸನ: ಇಂದು ಆರಂಭವಾಗಿದ್ದ ಎರಡು ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಮೊದಲ ದಿನ ಯಶಸ್ವಿಯಾಗಿ ಪೂರ್ಣಗೊಳ್ಳಲಿಲ್ಲ.
ಹಾಸನ ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಗ್ರಾಮದ ಸಮೀಪದಲ್ಲಿ ಆರಂಭವಾಗಿದ್ದ ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಬೆಳಿಗ್ಗೆಯಿಂದಲೂ ಕಾಡಾನೆಗಳನ್ನು ಟ್ರ್ಯಾಕ್ ಮಾಡುತ್ತಿದ್ದರು.
ಆದರೆ, ಪುಂಡಾನೆಗಳು ಹಿಂಡಿನೊಂದಿಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ. ಪುಂಡಾನೆಗಳನ್ನು ಗುರುತಿಸಿದ ನಂತರ, ಮಾವುತರು ಸಾಕಾನೆಗಳನ್ನು ಕರೆತಂದರಾದರೂ, ಈ ಆನೆಗಳು ಒಂದೆಡೆ ನಿಲ್ಲದೆ ಗುಂಪಿನಿಂದ ಬೇರ್ಪಡಲಿಲ್ಲ.
ಅರಿವಳಿಕೆ ಚುಚ್ಚುಮದ್ದು ನೀಡಲು ವೈದ್ಯ ಡಾ. ರಮೇಶ್ ಹರಸಾಹಸ ಪಟ್ಟರೂ, ಕಾಫಿ ತೋಟ ಮತ್ತು ಕಾಡಿನೊಳಗೆ ಕಾಡಾನೆಗಳು ಕಣ್ಮರೆಯಾದವು. ಇದರಿಂದಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಕುಮ್ಕಿ ಆನೆಗಳಾದ ಪ್ರಶಾಂತ, ಕಂಜನ್, ಧನಂಜಯ, ಮಹೇಂದ್ರ, ಹರ್ಷ, ಕರ್ನಾಟಕ ಭೀಮ ಮತ್ತು ಏಕಲವ್ಯಗಳನ್ನು ಬಿಕ್ಕೋಡು ಬಳಿಯ ತಾತ್ಕಾಲಿಕ ಕ್ಯಾಂಪ್‌ಗೆ ಕಳುಹಿಸಲಾಯಿತು. ಬೆಳಿಗ್ಗೆಯಿಂದಲೂ ಕಾಡಾನೆಗಳ ಬೆನ್ನುಹತ್ತಿದ್ದ ಇಟಿಎಫ್ ಸಿಬ್ಬಂದಿ ಶ್ರಮವಹಿಸಿದರೂ ಉದ್ದೇಶಿತ ಫಲ ಸಿಗಲಿಲ್ಲ.
ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯನ್ನು ನಾಳೆ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.