ಹಾಸನ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಮುನಿಸು ಶಮನಕ್ಕಾಗಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಮೈತ್ರಿ ಪಕ್ಷಗಳ ವಿಶೇಷ ಸಮನ್ವಯ ಸಮಿತಿ ಸಭೆಯಲ್ಲಿನ ಸಂಧಾನ ಬಹುತೇಕ ಯಶಸ್ವಿಯಾಗಿದ್ದು, ಪ್ರಜ್ವಲ್ ಜತೆ ಮಾತನಾಡದಿದ್ದರೂ ಕೆಲಸ ಮಾಡಲು ಪ್ರೀತಂ ಒಪ್ಪಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಜೆಡಿಎಸ್‌ನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಮತ್ತಿತರರು ಭಾಗಿಯಾಗಿದ್ದರು. ಪ್ರೀತಂಗೌಡ ತಟಸ್ಥ ಧೋರಣೆ ಅನುಸರಿಸುತ್ತಿರುವ ಬಗ್ಗೆ ಜೆಡಿಎಸ್ ನಾಯಕರು ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಮುಖಂಡರ ಮನವೊಲಿಸುತ್ತಾರೆ. ಪ್ರೀತಂಗೌಡ ಅವರೊಂದಿಗಿನ ಭಿನ್ನಮತ ಕೂಡ ಶಮನವಾಗಲಿದೆ. 4ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ಅಂದು ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.
ವಿಜಯೇಂದ್ರ ಮಾತನಾಡಿ, ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರೆ. ಪ್ರಜ್ವಲ್ ಪರವಾಗಿ ನಾವೆಲ್ಲ ಶ್ರಮ ಹಾಕಿ ಗೆಲ್ಲಿಸುತ್ತೇವೆ. ಹಳೆಯದನ್ನೆಲ್ಲ ಮರೆತು ಒಗ್ಗಟ್ಟಾಗಿ ಜೊತೆಯಲ್ಲಿ ಹೋಗೋಣ ಎನ್ನುವ ನಿರ್ಧಾರ ಮಾಡಿದ್ದೇವೆ. ನಾಮ ಪತ್ರ ಸಲ್ಲಿಕೆಗೆ ನಾನು ಕೂಡ ಹೋಗುತ್ತೇನೆ. ಬಿಜೆಪಿ ಮುಖಂಡ ಪ್ರೀತಂಗೌಡ ಕೂಡ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಾರೆ. ನಾನು ಮಾತನಾಡುವುದಿಲ್ಲವಾದರೂ ಕೆಲಸಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.