28ಕ್ಷೇತ್ರಗಳಲ್ಲೂ ಮೈತ್ರಿ ಗೆಲುವಿಗಾಗಿ ಯಾರ ಭೇಟಿಗೂ ನಾ ತಯಾರು ಎಂದ ಕುಮಾರಸ್ವಾಮಿ

ಹಾಸನ: ರಾಜ್ಯದ 28 ಲೋಕಸಭಾ ಸ್ಥಾನಗಳನ್ನೂ ಎನ್‌ಡಿಎ ಮೈತ್ರಿಕೂಟ ಗೆಲ್ಲಬೇಕು. ಅದಕ್ಕಾಗಿ ಯಾರನ್ನು ಬೇಕಾದ್ರೂ ಭೇಟಿಯಾಗಲು ತಯಾರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಬಿದ್ದರೆ ಮಂಡ್ಯ ಸಂಸದೆ ಸುಮಲತಾ ಅವರನ್ನೂ ಭೇಟಿಯಾಗುವೆ ಎಂದು ಪುನರುಚ್ಛರಿಸಿದರು.

ಸುಮಲತಾ ಅವರಿಗೆ ಹಿಂದೆ ಬಿಜೆಪಿಯವರು ಬೆಂಬಲ ನೀಡಿದ್ದರು. ಆದರೆ ಅವರು ಬಿಜೆಪಿ ಮೆಂಬರ್ ಆಗಿರದಿದ್ದರೆ ಭೇಟಿ ಮಾಡುವ ಅವಶ್ಯಕತೆ ಬರಲ್ಲ. ಆದರೆ
28 ಕ್ಕೆ 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ದೃಷ್ಟಿಯಿಂದ ನಾನು ಯಾರನ್ನು ಬೇಕಾದರೂ ಭೇಟಿ ಮಾಡಲು ತಯಾರಾಗಿದ್ದೇನೆ ಎಂದರು.

ವಿ.ಸೋಮಣ್ಣ-ದೇವೇಗೌಡರ ಭೇಟಿ ಹಾಗೂ ಸಿ.ಟಿ.ರವಿ-ಕುಮಾರಸ್ವಾಮಿ ಭೇಟಿ ಬಗ್ಗೆ ಮೈತ್ರಿಯ ವಿಷಯಕ್ಕೆ ಸಂಬಂಧಪಟ್ಟಂತೆ, 28ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ದೃಷ್ಟಿಯಿಂದ ಯಾರನ್ನು ಬೇಕಾದರೂ ಭೇಟಿ ಮಾಡಲು ನಾನು ಮುಕ್ತನಾಗಿದ್ದೇನೆ ಎಂದರು.

ತನಿಖೆಗೆ ಆದೇಶಿಸಲಿ: ರಾಜ್ಯದ ಅನ್ನಭಾಗ್ಯ ಅಕ್ಕಿಗೆ ಅರಿಶಿಣ ಹಚ್ಚಿ ಮಂತ್ರಾಕ್ಷತೆ ಎಂದು ಹಂಚಿಕೆ ಮಾಡುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, ಇದು ಅತ್ಯಂತ ಬಾಲಿಶ ಹೇಳಿಕೆ, ಅದಕ್ಕೆ ಉತ್ತರ ಕೊಡಬೇಕಾದ ಅಗತ್ಯ ಇಲ್ಲ ಎಂದರು.

ಅನ್ನಭಾಗ್ಯ ಅಕ್ಕಿ ಅಂತಿದ್ದಾರಲ್ಲ, ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದವರು ನುಡಿದಂತೆ ನಡೆದ್ರಾ? ಎಂದು ಖಾರವಾಗಿ ಕೇಳಿದರು.

ಮಂತ್ರಾಕ್ಷತೆ ಮಾಡಿರುವ ಅಕ್ಕಿ ಬೆಳೆದಿರುವನು ನಮ್ಮ ರೈತ. ಕೃಷಿಕರು ಬೆಳೆದಿರುವ ಅಕ್ಕಿಯನ್ನು ಮಂತ್ರಾಕ್ಷತೆ ಮಾಡಿ ಮನೆ ಮನೆಗೆ ಕೊಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಅದರ ಬಗ್ಗೆ ಸಣ್ಣತನದಲ್ಲಿ ಮಾತನಾಡಬಾರದು ಎಂದು ಟಾಂಗ್ ನೀಡಿದರು.

ಬೇಕಿದ್ದರೆ ಅದರ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದ ಕುಮಾರಸ್ವಾಮಿ, ಕರ್ನಾಟಕದಲ್ಲಿ ಪ್ರತಿ ತಿಂಗಳು ಅಕ್ಕಿ ಕೊಡಲು ಪಡಿತರ ಮಾಲೀಕರಿಂದ ತೆಗೆದುಕೊಂಡು ಹೋಗಿದ್ದಾರೋ, ಇಲ್ಲ ಕಳ್ಳ ಸಾಗಾಣೆ ಮಾಡಿದ್ದಾರೋ ಎಂಬುದನ್ನು ಜನರ ಮುಂದಿಡಿ ಎಂದು ಕುಟುಕಿದರು.

ನಿಖಿಲ್ ಕುಮಾರಸ್ವಾಮಿ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ಉದ್ಘಾಟನೆ ಹಿನ್ನೆಲೆ ಅವರದೇ ಆದ ರೀತಿಯಲ್ಲಿ ಭಕ್ತಿ ತೋರಿಸುತ್ತಿದ್ದಾರೆ.  ರಾಮಮಂದಿರ ಉದ್ಘಾಟನೆಗೆ ರಾಜ್ಯದ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡದೇ ಇರುವುದರ ಹಿಂದೆ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂದು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಲ್ಲಿನ ಟ್ರಸ್ಟಿಗಳು ತೆಗೆದುಕೊಂಡಿರುವ ತೀರ್ಮಾನ. ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದರು.

ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲು ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ದೇಶದ ಸಂವಿಧಾನದಲ್ಲೇ ಅವಕಾಶ ಇದೆ. ಸಾರ್ವಜನಿಕರಿಗೆ ತೊಂದರೆ, ಕಾನೂನು ಬಾಹಿರವಾಗಿ ಪ್ರತಿಭಟನೆ ಮಾಡಿದ್ರೆ
ಕೇಸ್ ಹಾಕಲಿ, ಈ ಸರ್ಕಾರದವರು ನಾವು ಸಂವಿಧಾನದ ರಕ್ಷಕರು ಅಂತ ಜಾಗಟೆ ಹೊಡಿತಾರಲ್ಲ, ಈ ರೀತಿ ಕೇಸ್ ಹಾಕುವುದರಿಂದ ಯಾವ ರೀತಿ ಸಂವಿಧಾನ ರಕ್ಷಣೆ ಮಾಡ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಹಾಸನದಲ್ಲಿ ಎಂಪಿ ಚುನಾವಣೆಗೆ ಬಿಜೆಪಿಗೆ ಟಿಕೆಟ್ ಸಿಗಲಿದೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆಗೆ ಅದನ್ನು ಕನ್ಸಿಡರ್ ಮಾಡೋಣ ಬನ್ನಿ.
ಅವರ ಅಹವಾಲು, ಮನವಿ ಏನಿದೆ, ಅಂತಹ ಅನಿರ್ವಾಯತೆ ಬಂದರೆ ಚರ್ಚೆ ಮಾಡೋಣ. ಎರಡೂ ಪಕ್ಷಗಳ ನಾಯಕರು ಕುಳಿತು ಚರ್ಚೆ ಮಾಡಿದಾಗ ಅದನ್ನು ಕನ್ಸಿಡರ್ ಮಾಡಬೇಕು ಅಂದರೆ ಮಾಡೋಣ. ಆ ಟೈಂಗೆ ಹೇಳ್ತೀವಿ, ಇನ್ನೂ ಸೀಟ್ ಹೊಂದಾಣಿಕೆ ಆಗಿಲ್ಲವಲ್ಲ ಎಂದು ನಕ್ಕರು. ತಾವು ಎಂಪಿ ಚುನಾವಣೆಗೆ ಸ್ಪರ್ಧೆ ಹಾಗೂ ಕೇಂದ್ರ ಮಂತ್ರಿ ಸ್ಥಾನ ಆಫರ್ ಬಗ್ಗೆ ಅದೆಲ್ಲ ಮಾಧ್ಯಮಗಳಲ್ಲಿ ಗಮನಿಸಿದ್ದೇನಷ್ಟೇ, ಟೈಂ ಬಂದಾಗ ಎಲ್ಲವನ್ನೂ ಹೇಳುವೆ ಎಂದರು.