ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿರುವ ಎಂ.ಶ್ರೇಯಸ್ ಪಟೇಲ್ ಹೆಸರು ಈಗ ಎಲ್ಲರ ಕುತೂಹಲ ಕೆರಳಿಸಿದೆ.
ಹಾಸನ ಜಿಲ್ಲಾ ಕಾಂಗ್ರೆಸ್ ನಲ್ಲಿನ ಹಲವು ಘಟಾನುಘಟಿ ಮುಖಂಡರನ್ನು ಹಿಂದಿಕ್ಕಿ ಟಿಕೆಟ್ ಗಳಿಸಿರುವ ಯುವಕ ಹಿನ್ನೆಲೆಯೇನು? ಯಾರು ಈ ಶ್ರೇಯಸ್ ಪಟೇಲ್ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
32 ವರ್ಷ ವಯಸ್ಸಿನ ಶ್ರೇಯಸ್ ಪಟೇಲ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕೀಯ ಕಡುವಿರೋಧಿಯಾಗಿದ್ದ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ.
ಆರು ವರ್ಷದ ಬಾಲಕನಾಗಿದ್ದಾಗಲೇ ಅನಾರೋಗ್ಯಕ್ಕೊಳಗಾದ ತಂದೆ ಮಹೇಶ್ ಅವರನ್ನು ಕಳೆದುಕೊಂಡ ಶ್ರೇಯಸ್, ಆಗಿನಿಂದ ಅವರು ತಾತಾ ಪುಟ್ಟಸ್ವಾಮಿಗೌಡ ಹಾಗೂ ತಾಯಿ ಅನುಮಪಮಾ ಅವರ ನೆರಳಿನಲ್ಲಿ ಬೆಳೆದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆದು ರಾಜಕೀಯ ಮಾಡುತ್ತಿದ್ದ ಜಿ.ಪುಟ್ಟಸ್ವಾಮಿಗೌಡ ಅವರ ನಿಧನದ ನಂತರ ಅವರ ಕುಟುಂಬವೂ ರಾಜಕೀಯ ಶಕ್ತಿ ಕಳೆದುಕೊಂಡಿತು.
ಅನುಪಮಾ ಅವರು 2008 ಹಾಗೂ 2013ರಲ್ಲಿ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೆದುರು ಪರಾಭವಗೊಂಡಿದ್ದರು.
ಎದುರಾಳಿಗಳ ಜತೆಗೆ ಅನುಪಮಾ ಅವರು ಪಕ್ಷದೊಳಗಿನ ವಿರೋಧಿಗಳನ್ನೂ ಎದುರಿಸಿ ಹೋರಾಟ ನಡೆಸುವ ಅನಿವಾರ್ಯತೆಯಿತ್ತು.
ಈ ಎಲ್ಲ ಅನಾನುಕೂಲದ ಸನ್ನಿವೇಶದಲ್ಲಿ 2016ರಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಂಡಿಗನಹಳ್ಳಿ ಜಿಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೇಯಸ್ ಪಟೇಲ್ ಅಧಿಕೃತವಾಗಿ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಬೆಂಗಳೂರಿನ ಅಕ್ಷತಾ ಅವರನ್ನು ವಿವಾಹವಾದ ಅವರಿಗೆ ಪತ್ನಿ ಬೆನ್ನೆಲುಬಾಗಿ ನಿಂತಿದ್ದಾರೆ.
ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಉಕ್ಕಿನ ಹಿಡಿತವಿದ್ದ ದಂಡಿಗನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಮಣಿಸಿ ಅಚ್ಚರಿಯ ಜಯ ಸಾಧಿಸುವ ಮೂಲಕ ಶ್ರೇಯಸ್ ಎಲ್ಲರ ಗಮನ ಸೆಳೆದಿದ್ದರು.
2021ರವರೆಗಿನ ತಮ್ಮ ಅವಧಿಯಲ್ಲಿ ಅವರು ದಂಡಿಗನಹಳ್ಳಿ ಹೋಬಳಿಯಲ್ಲಿ ಜೆಡಿಎಸ್ ಸಂಘಟನೆಯ ಜವಾಬ್ದಾರಿ ಹೊತ್ತ ರೇವಣ್ಣ ಅವರ ಹಿರಿಯ ಪುತ್ರ ಡಾ.ಸೂರಜ್ ಅವರ ಪ್ರತಿರೋಧವನ್ನು ಎದುರಿಸುವ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿದರು.
2023ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಶ್ರೇಯಸ್ ಅವರನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಂತಹ ಪ್ರಭಾವಿ ಎದುರು ಕಣಕ್ಕಿಳಿಸಿತು. ಬಹಳಷ್ಟು ಜನರು ಶ್ರೇಯಸ್ ಅವರನ್ನು ನಿರ್ಲಕ್ಷಿಸಿ, ರೇವಣ್ಣ ಸುಲಭ ಗೆಲುವು ಸಾಧಿಸುತ್ತಾರೆ ಎನ್ನುವ ಲೆಕ್ಕಾಚಾರದಲ್ಲಿದ್ದರು.
ಆದರೆ ತಮ್ಮ ನಯ-ವಿನಯದ ನಡವಳಿಕೆಯಿಂದ ಪಕ್ಷದ ಕಾರ್ಯಕರ್ತರು, ಮುಖಂಡರು, ಮತದಾರರ ಮನಸೆಳೆದ ಅವರು ರೇವಣ್ಣ ಅವರಂತಹ ಪ್ರಬಲ ರಾಜಕಾರಣಿ ಗೆಲುವಿಗಾಗಿ ತಿಣುಕಾಡುವಂತೆ ಮಾಡಿದರು. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಅವರು ಕೇವಲ 2654 ಮತಗಳ ಅಂತರದಲ್ಲಿ ಪರಾಭವಗೊಂಡರು.
ಸೋತ ನಂತರವೂ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೃಪಾಕಟಾಕ್ಷವೂ ಲಭ್ಯವಾಯಿತು. ಅದರ ಪರಿಣಾಮವಾಗಿ ಈಗ ಅವರಿಗೆ ಹಾಸನ ಕ್ಷೇತ್ರದ ಅಭ್ಯರ್ಥಿಯಾಗುವ ಅದೃಷ್ಟ ಒಲಿದಿದ್ದು, ದೊಡ್ಡ ಸವಾಲಿಗೆ ಅವರು ತಮ್ಮನ್ನು ಒಡ್ಡಿಕೊಳ್ಳಲಿದ್ದಾರೆ.