ತಾಯಿ-ಮಕ್ಕಳ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್: ಗಂಡನಿಲ್ಲದಾಗ ಬರುತ್ತಿದ್ದ ಪ್ರಿಯಕರನಿಂದಲೇ ಕೊಲೆಯಾದಳು ಪ್ರೇಯಸಿ

ಪುಟಾಣಿ ಮಕ್ಕಳನ್ನೂ ಕೊಂದು ಗ್ಯಾಸ್ ಸಿಲಿಂಡರ್ ಪೈಪ್ ಕಿತ್ತೆಸೆದು ಡೋರ್ ಲಾಕ್ ಮಾಡಿಕೊಂಡು ಹೋಗಿದ್ದ ಪಾಪಿ

ಹಾಸನ:ನಗರದ ದಾಸರಕೊಪ್ಪಲಿನಲ್ಲಿ ನಡೆದಿದ್ದ ತಾಯಿ ಹಾಗೂ ಇಬ್ಬರು ಮಕ್ಕಳ ನಿಗೂಢ ಸಾವಿಗೆ ದೊಡ್ಡ ತಿರುವು ಸಿಕ್ಕಿದೆ. ಚಿನ್ನಾಭರಣದಾಸೆಗೆ ತಾಯಿ-ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂಬುದು ಪೊಲೀಸ್ ತನಿಖೆ ನಂತರ ಬಯಲಾಗಿದೆ. ಇದರಿಂದ ಆತ್ಮಹತ್ಯೆ ಮತ್ತಿತರ ವದಂತಿಗಳಿಗೆ ತೆರೆ ಬಿದ್ದಿದೆ.

ಘಟನೆ ಹಿನ್ನೆಲೆ: ಜ.೧ ರ ರಾತ್ರಿ ದಾಸರಕೊಪ್ಪಲಿನ ಮನೆಯೊಂದರಲ್ಲಿ ತಾಯಿ ಶಿವಮ್ಮ ಹಾಗೂ ಮಕ್ಕಳಾದ ಪವನ್ ಮತ್ತು ಸಿಂಚನಾ ಮೂವರೂ ನಿಗೂಢವಾಗಿ ಸಾವನ್ನಪ್ಪಿದ್ದರು.

ಇದರ ಬಗ್ಗೆ ನಾನಾ ವದಂತಿಗಳು ಹರಿದಾಡಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿದರು.

ಈ ವೇಳೆ ಯಾವುದೋ ದುರುದ್ದೇಶದಿಂದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ, ಚಿನ್ನ ಮತ್ತು ಬೆಳ್ಳಿಯ ಆಭರಣ ದೋಚಿಕೊಂಡು ಹೋಗಿರುವ ಹಂತಕ, ಕೊಲೆ ಮರೆಮಾಚುವ ಉದ್ದೇಶದಿಂದ ಗ್ಯಾಸ್ ಸಿಲಿಂಡರ್‌ನ ಪೈಪ್ ಕಿತ್ತುಹಾಕಿ, ಗ್ಯಾಸ್ ಆನ್ ಮಾಡಿ, ಹೊರಗಿನಿಂದ ಮನೆಯ ಡೋರ್ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂಬುದು ಗೊತ್ತಾಗಿದೆ. ವಿಷಾನಿಲ ಸೇವನೆಯಿಂದ ಈ ದುರಂತ ಸಂಭವಿಸಿದೆ ಎಂಬುದು ಬಿಂಬಿಸುವ ಹಂತಕನ ದುರುದ್ದೇಶ ಬಯಲಾಗಿದೆ.

ಅನುಮಾನ ನಿಜ: ಜ. ೨ ರಂದು ಮೃತಳ ಪತಿ ತೀರ್ಥಪ್ರಸಾದ, ತಾಯಿ ಹುಲಿಯಮ್ಮ ಮೊದಲಾದವರು, ಶವಗಳು ಬಿದ್ದಿದ್ದ ಸಮಯದಲ್ಲಿ ಶಿವಮ್ಮಳ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ, ಕಾಸು ಹಾಗೂ ಗುಂಡುಗಳಿದ್ದ ಮಾಂಗಲ್ಯ ಸರ, ಕಾಲುಗಳಲ್ಲಿದ್ದ ಬೆಳ್ಳಿಯ ಕಾಲು ಚೈನು ಹಾಗೂ ವಿವೋ ಮೊಬೈಲ್ ಇರಲಿಲ್ಲ. ಇದು ಒಂದು ಅನುಮಾನವಾದರೆ ಶವಸಂಸ್ಕಾರ ನಂತರ ಮನೆಯ ಬಳಿ ಹೋದಾಗ ಸ್ಥಳೀಯರು ನಿಂಗಪ್ಪ ಕಾಗವಾಡ ಎಂಬುವವನು ಆಗಾಗ ನಿಮ್ಮ ಮಗಳ ಮನೆಗೆ ಬರುತ್ತಿದ್ದ. ಹಲವು ದಿನ ನಿಮ್ಮ ಮಗಳ ಮನೆಯಲ್ಲಿಯೇ ಉಳಿಯುತ್ತಿದ್ದ ಎಂದು ತಿಳಿಸಿದ್ದರು.

ನಿಂಗಪ್ಪ ಕಾಗವಾಡ, ತೀರ್ಥಪ್ರಸಾದ ಹಾಗೂ ಶಿವಮ್ಮ ಬಿಜಾಪುರದಲ್ಲಿ ಬೇಕರಿ ನಡೆಸುತ್ತಿದ್ದಾಗ ಪರಿಚಯವಾಗಿದ್ದ. ಅಲ್ಲಿಂದ ಸ್ನೇಹಿತನಾಗಿದ್ದ ಎನ್ನಲಾಗಿದೆ. ನಾನೂ ಸಹ ಮನೆಗೆ ಹೋದಾಗ ನಿಂಗಪ್ಪ ಮನೆಯಲ್ಲೇ ಇದ್ದು, ಮಗಳೊಂದಿಗೆ ಸಲುಗೆಯಿಂದ ಇರುತ್ತಿದ್ದ ಎಂದು ಹುಲಿಯಮ್ಮ ಪೊಲೀಸರಿಗೆ ತಿಳಿಸಿದ್ದರು.

ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಜ.೧ ರ ರಾತ್ರಿ ನಿಂಗಪ್ಪನೇ ಮೂವರನ್ನು ಕೊಂದು ಚಿನ್ನಾಭರಣ ದೋಚಿದ್ದಾನೆ ಎಂಬುದು ಗೊತ್ತಾಗಿದೆ. ಆರೋಪಿ ಬಂಧನಕ್ಕೆ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.