ಹಾಸನದ ಹಾವಿನ ಕೇಶವ ಮೈಸೂರಿನಲ್ಲಿ ಅರೆಸ್ಟ್!: ಹಾವು ಆಡಿಸುವಾತ ಇನ್ನೋವಾ ಕ್ರಿಸ್ಟಾ ಮಾಲೀಕ!

ಹಾಸನ: ನಗರದ ಸ್ವಯಂ ಘೋಷಿತ ಉರಗ ರಕ್ಷಕ ಹಾವಿನ ಕೇಶವನನ್ನು ಮೈಸೂರು ಅರಣ್ಯ ದಳದ ಪೊಲೀಸರು ಬಂಧಿಸಿ ಮೂರು ನಾಗರಹಾವುಗಳನ್ನು ರಕ್ಷಿಸಿದ್ದಾರೆ.

ಉರಗ ಪ್ರೇಮಿ ಎಂದು ಹೇಳಿಕೊಂಡು ತನ್ನ ಐಷಾರಾಮಿ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ನಾಗರ ಹಾವುಗಳನ್ನು ಪ್ರದರ್ಶನಕ್ಕಿಟ್ಟು ಹಣ ಸಂಪಾದಿಸುತ್ತಿದ್ದ ಹಾವಿನ ಕೇಶವ ತನ್ನ ವ್ಯವಹಾರವನ್ನು ಮೈಸೂರಿನವರೆಗೆ ವಿಸ್ತರಿಸಿದ್ದಾನೆ.

ಮೈಸೂರು ರಿಂಗ್‌ ರಸ್ತೆಯ ಹಳೆ ಕೆಸರೆ ಮಾರ್ಗದ ರಸ್ತೆಯ ಬದಿಯಲ್ಲಿ ವನ್ಯಜೀವಿಗಳಾದ ಹಾವುಗಳನ್ನು ಪ್ರದರ್ಶನಕ್ಕಿಟ್ಟು ಹಿಂಸಿಸಿದ ಆರೋಪದಡಿ ಅವನನ್ನು ಬಂಧಿಸಲಾಗಿದೆ.

ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದಾಗ ಕೇಶವ ತನ್ನ ಕಾರಿನ ಡಿಕ್ಕಿ ಬಾಗಿಲು ತೆಗೆದು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾವುಗಳನ್ನು ಪ್ರದರ್ಶನಕ್ಕಿಟ್ಟಿದ್ದ. ನಾಗರಹಾವು ತಪ್ಪಿಸಿಕೊಳ್ಳದಂತೆ ಅದರ ಬಾಲದ ಮೇಲೆ ಸೈಜ್ ಕಲ್ಲು ಇರಿಸಿದ್ದ.

ತಕ್ಷಣವೇ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮೊಸಳೆಹೊಸಹಳ್ಳಿಯಿಂದ ಹಾವುಗಳನ್ನು ತಂದಿದ್ದೇನೆ. ಇದು ನನ್ನ ಜೀವನೋಪಾಯ ಎಂದು ಹೇಳಿಕೊಂಡಿದ್ದಾನೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮೊಸಳೆಹೊಸಹಳ್ಳಿಯಿಂದ ಮೈಸೂರಿಗೆ ಬರುತ್ತೇನೆ. ಖಾಲಿ ಜಾಗ ಹಾಗು ಜನರ ಓಡಾಟ ಇರುತ್ತದೆಯೋ ಅಲ್ಲಿ ಹಾವುಗಳನ್ನು ಪ್ರದರ್ಶನಕ್ಕೆ ಇಡುತ್ತೇನೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.

ವಶಪಡಿಸಿಕೊಂಡಿರುವ ನಾಗರ ಹಾವುಗಳನ್ನು ತಜ್ಞ ವೈದ್ಯರು ಪರಿಶೀಲಿಸಿದ ಬಳಿಕ ಮೈಸೂರು ಆರ್‌ಎಫ್‌ಓ ಅವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.