ಕೃಷ್ಣೇಗೌಡ ಕೊಲೆ ಪ್ರಕರಣ ಸಿಐಡಿಗೆ; ಇಂದಿನಿಂದಲೇ ಸಿಐಡಿ ಡ್ರಿಲ್!

ಆರೋಪಿಗಳ ಪತ್ತೆಯಲ್ಲಿ ಪೊಲೀಸರ ವೈಫಲ್ಯ

ಹಾಸನ: ಮಾಜಿ ಸಚಿವ ಎಚ್ ಡಿ ರೇವಣ್ಣ ಆಪ್ತ ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣವನ್ನು ಗುರುವಾರ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.

ಆರೋಪಿಗಳ ಬಂಧನದ ವಿಷಯದಲ್ಲಿ ಜಿಲ್ಲಾ ಪೊಲೀಸ್ ವಿಫಲಗೊಂಡಿದ್ದರಿಂದ ಪ್ರಕರಣ ಹಳ್ಳಹಿಡಿದು ಹೋಗಬಹುದು ಎನ್ನುವ ಹಂತದಲ್ಲಿ ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ.

ಕೃಷ್ಣೇಗೌಡ ಪ್ರಕರಣದ ತನಿಖೆಗೆ ಸಿಐಡಿಗೆ ವಹಿಸಿರುವ ಆದೇಶದ ಪ್ರತಿ

ತಕ್ಷಣದಿಂದ ಜಾರಿಗೆ ಬರುವಂತೆ ಪ್ರಕರಣದ ತನಿಖಾಧಿಕಾರಿ ಹತ್ಯೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಿಐಡಿಗೆ ಸಲ್ಲಿಸಲು ಸೂಚಿಸಿದ್ದಾರೆ.

ಜಿಲ್ಲಾ ಪೊಲೀಸ್ ಗೆ ಹಿನ್ನೆಡೆ:
ಕೃಷ್ಣೇಗೌಡ ಅವರ ಹತ್ಯೆ ನಂತರ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದರೂ ಪ್ರಮುಖ ಆರೋಪಿಗಳಾದ ಯೋಗಾನಂದ ಹಾಗೂ ಅನಿಲ್ ಅವರಿಬ್ಬರ ಸುಳಿವು ಪತ್ತೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಈ ನಡುವೆ ಪ್ರಕರಣದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ರಾಜ್ಯದ ಗಮನ ಸೆಳೆದಿದ್ದ ಪ್ರಕರಣ ಹಳ್ಳ ಹಿಡಿಯುವ ಲಕ್ಷಣಗಳಿದ್ದವು.

ಪ್ರಕರಣದ ಗಂಭೀರತೆಗೆ ತಕ್ಕಂತೆ ತನಿಖೆ ನಡೆಯದಿರುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದಿತ್ತು.
ಪ್ರಕರಣ ಘಟಿಸಿದಾಗಿನ ಎಸ್ಪಿ, ಹರಿರಾಂಶಂಕರ್ ವರ್ಗಾವಣೆ ನಂತರ ಆ ಸ್ಥಾನಕ್ಕೆ ಬಂದ ಮೊಹಮದ್ ಸುಜೀತಾ ಅವರಿಂದಲೂ ಆರೋಪಿಗಳ ಸುಳಿವು ಪತ್ತೆ ಸಾಧ್ಯವಾಗಿರಲಿಲ್ಲ.

ಈಗ ಸಿಐಡಿ ಪ್ರವೇಶದಿಂದ ಪ್ರಕರಣದ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಶುಕ್ರವಾರವೇ ಸಿಐಡಿಯ ತನಿಖಾಧಿಕಾರಿ ನಗರಕ್ಕೆ ಆಗಮಿಸಲಿದ್ದು ಆರೋಪಿಗಳಿಗೆ ಮತ್ತೊಮ್ಮೆ ಡ್ರಿಲ್ ಆರಂಭವಾಗಲಿದೆ.