ಹಾಸನ: ಸಕಲೇಶಪುರ ತಾಲ್ಲೂಕಿನ ಕುನಿಗನಹಳ್ಳಿ ಗ್ರಾಮದಲ್ಲಿ ಮೂರು ಹತ್ತನೇ ತರಗತಿ ವಿದ್ಯಾರ್ಥಿಗಳ ನಾಪತ್ತೆ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ.
ಶರತ್ (16), ಧನಂಜಯ್ (16), ಮುರುಳಿ (16) ಎಂಬ ವಿದ್ಯಾರ್ಥಿಗಳು ನಿನ್ನೆ ಬೆಳಿಗ್ಗೆ 7.30ಕ್ಕೆ ಶಾಲೆಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅವರು ಶಾಲೆಗೆ ಹೋಗದೆ ನಾಪತ್ತೆಯಾಗಿದ್ದಾರೆ.
ಮೂವರು ವಿದ್ಯಾರ್ಥಿಗಳು ಆದರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿಲ್ಲವೆಂದು ಗಮನಿಸಿದ ಶಿಕ್ಷಕರು ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿದರು. ಆದರೆ, ಮಕ್ಕಳ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ, ಇದರಿಂದ ಪೋಷಕರು ಗಂಭೀರ ಆತಂಕಗೊಂಡಿದ್ದಾರೆ.
ನಾಪತ್ತೆಯಾದ ಶರತ್‌ನ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಮಕ್ಕಳ ಜಾಡು ಪತ್ತೆಹಚ್ಚಲು ಅಡ್ಡಿಯಾಗಿದೆ. ಈ ಬಗ್ಗೆ ಕುನಿಗನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು, ಮತ್ತು ಕಿರುಹುಣಸೆ ಗ್ರಾಮದ ಮಹೇಂದ್ರ ಅವರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಕ್ಕಳ ಹುಡುಕಾಟ ಆರಂಭಿಸಿದ್ದಾರೆ. ಈ ಘಟನೆ ಸ್ಥಳೀಯರನ್ನು ಹಾಗೂ ಪೋಷಕರನ್ನು ಚಿಂತೆಗೆ ದೂಡಿದೆ. ನಾಪತ್ತೆಯಾಗಿರುವ ಮಕ್ಕಳು ಎಲ್ಲಿಯಾದರೂ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಗಿದೆ.