ಕಾಂಗ್ರೆಸ್ ಗೆ ಮತ ಹಾಕಿದ ಹೈನುಗಾರರ ಹಾಲು ವಾಪಸ್ ಕಳಿಸಿದ ಡೇರಿ: ಹಾಲು ತುಂಬಿದ ಕ್ಯಾನ್‌ ನೊಂದಿಗೆ ಸೋಮನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ವಿರುದ್ಧ ಆಕ್ರೋಶ| ಡೇರಿ ಸೂಪರ್ ಸೀಡ್ ಗೆ ಆಗ್ರಹ

ಹಾಸನ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿ ಮತ ಹಾಕಿದ್ದೇವೆ ಎಂದು ಡೇರಿಯಲ್ಲಿ ನಾವು ತಂದ ಹಾಲು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಹಾಸನ ತಾಲ್ಲೂಕಿನ, ದುದ್ದ ಹೋಬಳಿ, ಸೋಮನಹಳ್ಳಿ ಗ್ರಾಮಸ್ಥರು ಹಾಲು ತುಂಬಿದ ಕ್ಯಾನ್‌ಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಹಾಲು ಉತ್ಪಾದಕರು ತಮಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.

ದುದ್ದ ಹೋಬಳಿ, ಸೋಮನಹಳ್ಳಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಬಂದಿದೆ. ಜೆಡಿಎಸ್ ಗೆ ಮತ ಹಾಕದ ನಿಮ್ಮ ಹಾಲನ್ನು ಡೇರಿಗೆ ಹಾಕಿಸಿಕೊಳ್ಳುವುದಿಲ್ಲ ಎಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹೇಳುತ್ತಿದ್ದಾರೆ. ಇಂದು ನಾವು ತಂದ ಹಾಲನ್ನು ಸ್ವೀಕರಿಸದೇ ವಾಪಸ್ ಕಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಯೋಗಣ್ಣ, ಪರಮೇಶ ಹಾಗೂ ಇತರರು ಒತ್ತಡ ಹೇರಿ ನಮ್ಮಿಂದ ಹಾಲು ಪಡೆಯದಂತೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾಗೆ ಮನವಿ ಸಲ್ಲಿಸಿದರು.