ಹೊಳೆನರಸೀಪುರ: ತಾಲ್ಲೂಕಿನ ಹಳೇಕೋಟೆ ಹೋಬಳಿಯ ಸಿಗರನಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಗ್ರಾಮದ ಬಳಿಯೇ ಅಡ್ಡಾಡುತ್ತಿರುವ ಹೆಣ್ಣು ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅವುಗಳಿಗೆ ಆಹಾರ ಕೊಡಲು ನಿತ್ಯವೂ ಒಂದೊಂದು ಜಾನುವಾರು ಹಿಡಿದು ತಿನ್ನುತ್ತಿದೆ. ವಾರದಲ್ಲೇ ಏಳು ಜಾನುವಾರುಗಳನ್ನು ಚಿರತೆ ಹಿಡಿದು ತಿಂದಿದ್ದು, ಬಲಿಯಾಗಿರುವ ನಾಯಿಗಳಿಗೆ ಲೆಕ್ಕವಿಲ್ಲ.
ಮನೆಯ ಬಳಿಗೇ ಬಂದು ಮೇಕೆ ಮತ್ತು ಕುರಿಗಳನ್ನು ಹಿಡಿದು ಹೊತ್ತೊಯ್ಯುತ್ತಿದೆ. ಹಗಲಿನಲ್ಲೇ ಮನೆಯ ಬಳಿಗೆ ಚಿರತೆ ಬರುತ್ತಿರುವುದು ಗ್ರಾಮಸ್ಥರದಲ್ಲಿ ಆತಂಕ ಹೆಚ್ಚಿಸಿದೆ.
‘ಮನೆಯ ಬಳಿ ಮಕ್ಕಳು–ಮಹಿಳೆಯರ ಮೇಲೆ ಚಿರತೆ ಎರಗಿದರೆ ಏನು ಮಾಡಬೇಕು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ತಾಯಿ ಚಿರತೆ ಮತ್ತು ಮರಿಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು’ ಎಂದು ಆಗ್ರಹಿಸಿದರು.
‘ಈ ಕುರಿತು ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾನುವಾರುಗಳ ಬಲಿಯಾಗುತ್ತಿವೆ. ಜನರ ಮೇಲೂ ಚಿರತೆ ದಾಳಿ ನಡೆಸುವ ಸಾಧ್ಯತೆ ಇದೆ. ಕೂಡಲೇ ಸ್ಥಳಾಂತರ ಮಾಡದೆ ಜನರ ಪ್ರಾಣಕ್ಕೆ ತೊಂದರೆಯಾದರೆ ಅರಣ್ಯ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರವಿ ಎಚ್ಚರಿಸಿದರು.









