ಹಾಸನ: ಆಲೂರು ತಾಲ್ಲೂಕಿನ ಚೌಲ್ಗೆರೆ ಬಳಿಯ ಸುಂಕ ವಸೂಲಿ ಕೇಂದ್ರದ ವಿವಾದ ಸಂಬಂಧ ಡಿಸಿ ಸಿ. ಸತ್ಯಭಾಮ ಅಧ್ಯಕ್ಷತೆಯಲ್ಲಿ ನಡೆದ ಸಭೆ ಮುಕ್ತಾಯಗೊಂಡಿದ್ದು, ಮುಂದಿನ ಆದೇಶದವರೆಗೆ ಟೋಲ್ ಸಂಗ್ರಹವನ್ನು ನಿಲ್ಲಿಸುವಂತೆ ಡಿಸಿ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿ, “ಈ ವಿವಾದದ ನಿಭಾಯಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಟೋಲ್ ಅಗ್ರಿಮೆಂಟ್ ಕಾಪಿಯನ್ನು ಎಲ್ಲರೂ ಸೇರಿ ಪರಿಶೀಲನೆ ನಡೆಸಲಿದ್ದೇವೆ. ಆಮೇಲೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.
ಅಲ್ಲಿಯವರೆಗೆ ಯಾವುದೇ ವಾಹನಗಳಿಂದ ಟೋಲ್ ಸಂಗ್ರಹ ಮಾಡಬಾರದು ಎಂದು ಎನ್.ಎಚ್.ಎ.ಐ.ಗೆ ಸೂಚನೆ ನೀಡಿದ್ದಾರೆ.
ಈ ಸಭೆಯಲ್ಲಿ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಎನ್.ಎಚ್.ಎ.ಐ. ಅಧಿಕಾರಿಗಳು ಭಾಗವಹಿಸಿದ್ದರು.