ಹಾಸನ; ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಡ್ರ್ಯಾಗರ್ ನಿಂದ ದಾಳಿ ನಡೆಸಿದ ದರೋಡೆ ಪ್ರಕರಣವೊಂದರ ಪ್ರಮುಖ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೂಕನಬೆಟ್ಟದಲ್ಲಿ ಇಂದು ಮುಂಜಾನೆ ನಡೆದಿದೆ.
ಆರೋಪಿ ಸತೀಶ್ ಕಾಲಿಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಭರತ್‌ರೆಡ್ಡಿ ಗುಂಡು ಹಾರಿಸಿದ್ದಾರೆ. ಆರೋಪಿ ದಾಳಿಯಿಂದ ಕಾನ್ ಸ್ಟೇಬಲ್ ಪುಟ್ಟರಾಜು ಗಾಯಗೊಂಡಿದ್ದು ಇಬ್ಬರಿಗೂ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ದರೋಡೆ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ಸತೀಶ್ ಮತ್ತವನ ಸಹಚರರು ಬೂಕನ ಬೆಟ್ಟದಲ್ಲಿ ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಆಧರಿಸಿ ಚನ್ನರಾಯಪಟ್ಟಣ ನಗರ ಠಾಣೆ ಇನ್ಸ್ ಪೆಕ್ಟರ್ ರಘುಪತಿ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು.
ಡ್ರ್ಯಾಗನ್‌ನಿಂದ ಕಾನ್ಸ್‌ಟೇಬಲ್ ಪುಟ್ಟರಾಜು ಮೇಲೆ ಸತೀಶ್ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಪ್ರಾಣರಕ್ಷಣೆಗಾಗಿ ಪಿಎಸ್ಐ ಭರತ್ ರೆಡ್ಡಿ ಆರೋಪಿ ಕಾಲಿಗೆ ಗುಂಡು ಹಾರಿಸಿದರು.