ಹಾಸನ: ಸೂರಜ್‌ರೇವಣ್ಣ ಎಂಎಲ್‌ಸಿ ಆಗಿ ಮೂರು ವರ್ಷದಲ್ಲಿ ಎಷ್ಟು ಗ್ರಾ.ಪಂ.ಗೆ ಹೋಗಿದ್ದಾರೆ ಏನು ಕೆಲಸ ಮಾಡಿದ್ದಾರೆ ಎಂಬ ಶ್ರೇಯಸ್‌ಪಟೇಲ್ ಟೀಕೆಗೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ಸಂಸದನಾಗಿ ಆರು ತಿಂಗಳಾಗಿದೆ. ಅವರಿಗೆ ಬುದ್ದಿ ಭ್ರಮಣೆ ಆಗಿದೆ ಅನ್ನಿಸುತ್ತದೆ. ಸಂಸದರಿಗೆ ಮಾಹಿತಿ ಕೊರತೆ ಇರಬೇಕು. ನಾನು ಮಾಡಿರುವ ಕೆಲಸ ಕಣ್ಣೆದುರೇ ಇದೆ. ನಾನು ಹೊಳೆನರಸೀಪುರ ಕ್ಷೇತ್ರಕ್ಕೆ ಮಾತ್ರವೇ ಹಣ ನೀಡಿಲ್ಲ. ಇಡೀ ಜಿಲ್ಲೆಗೆ ಸಹಕಾರ ಆಗುವ ರೀತಿ ಅನುದಾನ ಕೊಟ್ಟಿದ್ದೇನೆ ಎಂದರು.
ಮೂರು ವರ್ಷದಲ್ಲಿ ಐವತ್ತು ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಹೋಗಿದೆ. ಸಾವಿರ ಹಳ್ಳಿಗಳಿಗೂ ಭೇಟಿ ಕೊಟ್ಟು ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ಮಾಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಗೆ ಎಂಪಿ ಕೊಡುಗೆ ಏನು?, ಜಿ.ಪಂ. ಸದಸ್ಯರಾಗಿದ್ದಾಗ ಅವರು ಒಂದು ಹೋಬಳಿಗೆ ಹತ್ತು ರೂಪಾಯಿ ಕೆಲಸ ಮಾಡಿಲ್ಲ. ಬೆರಳು ಮಾಡಿ ತೋರಿಸುವ ಒಂದೂ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಪೆನ್‌ಡ್ರೈವ್ ಹಂಚಿ ಅಚಾನಕ್ಕಾಗಿ ಸಂಸದರಾಗಿದ್ದಾರೆ. ಹಾಸನ ಜಿಲ್ಲೆಗೆ ಅವರ ಕೊಡುಗೆ ಏನು? ಸಂಸದನಾಗಿದ್ದೀನಿ ಎಂದು ದೊಡ್ಡದಾಗಿ ಕೇಂದ್ರ ಸಚಿವರಿಗೆ ಮನವಿ ಕೊಡುವುದಲ್ಲ. ಕಾಡಾನೆ ಸಮಸ್ಯೆ ಬಗ್ಗೆ ಕೇಂದ್ರ ಅರಣ್ಯ ಸಚಿವರಿಗೆ ಮನವಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಆನೆ ಓಡಾಟ ತಡೆಯಲು ಎಷ್ಟು ಕಡೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ದಾರೆ? ಇದಕ್ಕೆ ಕೇಂದ್ರ ಸರ್ಕಾರದ ಬಳಿ ಏಕೆ ಹೋಗಬೇಕು, ರಾಜ್ಯದಲ್ಲೇ ಅವರ ಸರ್ಕಾರ ಇದೆ. ಅವರು ಕೈಗೊಂಡಿರುವ ಕ್ರಮಗಳ ಮಾಹಿತಿ ಕೊಡಲಿ ಎಂದು ಸವಾಲು ಹಾಕಿದರು.
ಹಳ್ಳಿಗಳಿಗೆ ಹೋಗಿ ನಿಮ್ಮ ಕುಟುಂಬದ ಕೊಡುಗೆ ಏನಿದೆ?, ನಮ್ಮ ಕೊಡುಗೆ ಏನಿದೆ ಗೊತ್ತಾಗುತ್ತೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಿದ್ದಾರೆ. ನೀರಾವರಿ ಯೋಜನೆಗಳು, ಆರೋಗ್ಯ ಕೇಂದ್ರಗಳು, ಮೆಡಿಕಲ್ ಕಾಲೇಜು, ರಸ್ತೆಗಳನ್ನು ಹೋಗಿ ಒಮ್ಮೆ ನೋಡಿ. ರೈತರಿಗೆ ಶಾಶ್ವತವಾಗಿ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ.
ನಮ್ಮ ತಂದೆ ಕೆಲಸ ಮಾಡುವುದನ್ನು ಹೇಳಿಕೊಟ್ಟಿದ್ದಾರೆ, ಮೈಕ್ ಇಟ್ಟುಕೊಂಡು ಪುಕ್ಸಟ್ಟೆ ಪ್ರಚಾರ ತಗೊಳೊದನ್ನ ಹೇಳಿಕೊಟ್ಟಿಲ್ಲ. ವಾರಕ್ಕೆ ಒಂದು ದಿನ ಪ್ರೆಸ್‌ಮೀಟ್ ಮಾಡಿ ಪ್ರಚಾರ ತೆಗೆದುಕೊಳ್ಳುವುದಲ್ಲ. ನಮ್ಮ ಕುಟುಂಬದ್ದು ಏನಿದ್ದರೂ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
ನಮ್ಮ ಕೊಡುಗೆ ಏನು ಎಂಬುದು ಜಿಲ್ಲೆಯಲ್ಲಿ ಕಾಣುತ್ತಿದೆ. ಎಂಪಿ ಅಧಿಕಾರಿಗಳಿಗೆ ಬಹಳ ತೊಂದರೆ ನಿಡುತ್ತಿದ್ದಾರೆ. ವಿಧಾನಸೌಧದಲ್ಲಿ ಯಾವ ಕೊಠಡಿಗೆ ಹೋದರೂ ಎಂಪಿ ಲೆಟರ್‌ಹೆಡ್ ಸಿಗುತ್ತದೆ. ಅವರು ವರ್ಗಾವಣೆಗೆ ಧಂಧೆ ನಡೆಸುತ್ತಿದ್ದಾರೆ. ಲೆಟರ್‌ಹೆಡ್ ನೀಡುವುದನ್ನು ದಂಧೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಲೆಟರ್‌ಹೆಡ್ ಕೊಡಲು ಎರಡು ಲಕ್ಷ ರೂ. ಹಣ ಪಡೆಯುತ್ತಿದ್ದಾರೆ. ನಾನು ವರ್ಗಾವಣೆ ಮಾಡಲು ಒಂದೇ ಒಂದು ಲೆಟರ್ ಕೊಟ್ಟಿರುವುದನ್ನು ತೋರಿಸಿ ಎಂದರು.
ದೇವೇಗೌಡರ ಪರಿಶ್ರಮದಿಂದ ಹಾಸನಕ್ಕೆ ಐಐಟಿ ಬರಬಹುದು. ಎಂಪಿ ಯಾರಿಗೇ ಮನವಿ ಕೊಟ್ಟರೂ ಐಐಟಿ ಬರಲ್ಲ. ಐಐಟಿ ಬಂದರೆ ದೇವೇಗೌಡರು, ಮೋದಿಯಿಂದ ಅಷ್ಟೇ ಎಂದರು.