ಶಾಲೆಗೆ ಹೊರಟಿದ್ದ ಮಕ್ಕಳೆದುರೇ ರೌಡಿ ಕೊಲೆ: ಬೆಚ್ಚಿಬಿದ್ದ ಹೇಮಾವತಿ ನಗರ

ಆಘಾತಗೊಂಡ‌ ಮಕ್ಕಳು| ಪೋಷಕರ ಆತಂಕ

ಹಾಸನ: ಶಾಸಕ ಸ್ವರೂಪ್ ಪ್ರಕಾಶ್ ನಿವಾಸದ ಕೂಗಳತೆ ದೂರದಲ್ಲಿ ಬೆಳ್ಳಂಬೆಳಗ್ಗೆ ನಡೆದ ರೌಡಿ ಚೈಲ್ಡ್ ರವಿ ಹತ್ಯೆ ಹೇಮಾವತಿ ನಗರ ಬಡಾವಣೆಯನ್ನೇ ಬೆಚ್ಚಿಬೀಳಿಸಿದ್ದು, ಕೊಲೆಯ ಬರ್ಬರತೆ ಕಂಡು ಜನರು ತತ್ತರಿಸಿದ್ದಾರೆ.

ಚೈಲ್ಡ್ ರವಿಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ಸುತ್ತಮುತ್ತಲು ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲಿಯೇ ಅವನ ಬೈಕ್ ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಕೊಲೆಗಡುಕರು ತಮ್ಮ ಕೃತ್ಯ ನೋಡುವ ಮಕ್ಕಳ ಮನಸಿನ ಮೇಲೆ ಏನು ಪರಿಣಾಮ ಬೀರಬಹುದು ಎನ್ನುವುದನ್ನೂ ಆಲೋಚಿಸಿಲ್ಲ.

ಅಲ್ಲೊಂದು ಭೀಕರ ಕೃತ್ಯ ನಡೆಯುವ ಯಾವುದೇ ಸುಳಿವಿಲ್ಲದ ವಾಕಿಂಗ್ ಮಾಡುತ್ತಿದ್ದ ಜನರು, ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಮಕ್ಕಳು, ಅಂಗಡಿಯಲ್ಲಿ ಸಾಮಾನು ಖರೀದಿ ಮಾಡುತ್ತಿದ್ದವರ ಎದುರೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಬಸ್ ಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳು ಘಟನೆ ಕಂಡು ಆಘಾತಕ್ಕೊಳಗಾಗಿದ್ದಾರೆ‌.

ಅದೇ ಸಮಯಕ್ಕೆ ಅಲ್ಲಿ ಶಾಲಾ ಬಸ್ ಒಂದು ಆಗಮಿಸಿದ್ದು ಅದರಲ್ಲಿದ್ದ ಮಕ್ಕಳೂ ಕೊಲೆಯಾಗಿ ಬಿದ್ದವನ ಶವ, ಅದರಿಂದ ಹರಿಯುತ್ತಿದ್ದ ರಕ್ತ ಕಂಡು ಭೀತಿಗೊಂಡಿದ್ದಾರೆ. ಸ್ಥಳದಲ್ಲಿದ್ದವರು ಅಲ್ಲಿ ಅಪಘಾತ ಆಗಿದೆ ಎಂದು ಮಕ್ಕಳಿಗೆ ಹೇಳಿ ಸಮಾಧಾನಪಡಿಸಿದ್ದಾರೆ.