ಇದೆಂಥ ನ್ಯಾಯ? ಕೇರಳದಲ್ಲಿ ಆನೆ ತುಳಿದು ಸತ್ತವರಿಗೆ ₹15ಲಕ್ಷ ಪರಿಹಾರ; ಸಕಲೇಶಪುರದಲ್ಲಿ ಕಾಡಾನೆಗೆ ಬಲಿಯಾದ ಮನು ಕುಟುಂಬಕ್ಕೆ ಅಲೆದಾಟ ಭಾಗ್ಯ!

ಮಲೆನಾಡು ಜನರ ತೀವ್ರ ಆಕ್ರೋಶ

ಹಾಸನ : ಕೇರಳದ ವೈನಾಡಿನಲ್ಲಿ ಆನೆ ತುಳಿತಕ್ಕೆ ಬಲಿಯಾದ ವ್ಯಕ್ತಿಗೆ ಪರಿಹಾರ ನೀಡಿರುವ ಕರ್ನಾಟಕ ಸರ್ಕಾರ ತನ್ನದೇ ರಾಜ್ಯದ ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಇನ್ನೂ ಪೂರ್ಣ ಪರಿಹಾರ ನೀಡದೆ ಒಂದು ವರ್ಷದಿಂದ ಅಲೆದಾಡಿಸುತ್ತಿದೆ.

ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದ ಮನು ಕುಟುಂಬಕ್ಕೆ ಈವರೆಗೂ ಅರಣ್ಯ ಇಲಾಖೆ ಪರಿಹಾರವನ್ನೇ ನೀಡಿಲ್ಲ.

ಆನೆ ದಾಳಿಯಿಂದ ಮನು ಮೃತಪಟ್ಟಾಗ ಸ್ಥಳೀಯರು ಶವ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

ಮಧ್ಯರಾತ್ರಿ ಹೆಬ್ಬನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಂದಿನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜನರನ್ನು ಸಮಾಧಾನಪಡಿಸಲು ಹರಸಾಹಸಪಟ್ಟಿದ್ದರು.

ಪ್ರತಿಭಟನೆ ನಡೆಸುತ್ತಿದ್ದ ಮಾಜಿಶಾಸಕ ಎಚ್.ಎಂ.ವಿಶ್ವನಾಥ್‌ಗೆ ಸ್ವತಃ ಕರೆ ಮಾಡಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಆನೆ ದಾಳಿಯಲ್ಲಿ ಮೃತಪಡುವವರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರವನ್ನು ಏಳೂವರೆ ಲಕ್ಷ ರೂ.ನಿಂದ ಹದಿನೈದು ಲಕ್ಷಕ್ಕೆ ಇಂದಿನಿಂದಲೇ ಹೆಚ್ಚಿಸಿದ್ದೇವೆ. ಮನು ಕುಟುಂಬಕ್ಕೆ ಹದಿನೈದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು.

ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ್ದ ಪ್ರತಿಭಟನಾಕಾರರು, ಅಹೋರಾತ್ರಿ ಧರಣಿ ವಾಪಾಸ್ ಪಡೆದಿದ್ದರು. ಆದರೆ ರಾಜ್ಯ ಸರ್ಕಾರ ಮನು ಕುಟುಂಬಕ್ಕೆ ಏಳೂವರೆ ಲಕ್ಷ ರೂ. ಮಾತ್ರ ಪರಿಹಾರ ನೀಡಿದ್ದು, ಉಳಿದ ಏಳೂವರೆ ಲಕ್ಷ ರೂ. ಪರಿಹಾರದ ಹಣ ನೀಡಲು ಸಬೂಬು ಹೇಳುತ್ತಿರುವ ಅರಣ್ಯ ಇಲಾಖೆ ಅವರ ಕುಟುಂಬವನ್ನು ಅಲೆದಾಡಿಸುತ್ತಿದೆ.

ಮನು 2023 ನ.1 ರಂದು ಮೃತಪಟ್ಟಿದ್ದಾರೆ. ಆದರೆ ಡಿ.15 ರಿಂದ ಪರಿಹಾರ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಅವರ ಪ್ರಕರಣದಲ್ಲಿ 15 ಲಕ್ಷ ರೂ. ಪರಿಹಾರ ಅನ್ವಯ ಆಗಿಲ್ಲ ಎನ್ನುತ್ತಿರುವ ಅಧಿಕಾರಿಗಳ ವರಸೆಯಿಂದ ಮನು ಕುಟುಂಬದವರು ಹೈರಾಣಾಗಿದ್ದಾರೆ.

ರಾಜ್ಯದಲ್ಲಿ ಬಲಿಯಾದವನಿಗೆ ಅನ್ಯಾಯ ಎಸಗಿರುವ ರಾಜ್ಯ ಸರ್ಕಾರ ಹೊರ ರಾಜ್ಯದಲ್ಲಿ ಬಲಿಯಾದವನಿಗೆ ಹದಿನೈದು ಲಕ್ಷ ರೂ. ನೀಡಿದೆ ಎಂದು ಸರ್ಕಾರದ ನಡೆಗೆ ಮಲೆನಾಡು ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.