ಅತ್ಯಾಚಾರ ಪ್ರಕರಣ: ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಮೂರು ದಿನ ಪೊಲೀಸ್ ವಶಕ್ಕೆ

ಹಾಸನ: ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ, ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಹೊಳೆನರಸೀಪುರದ ಜೆಎಂಎಫ್‌ಸಿ ಕೋರ್ಟ್ ಆದೇಶ ನೀಡಿದೆ.

ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ನಾಳೆ ಬೆಳಗ್ಗೆ 9 ಗಂಟೆಯಿಂದ ಮೇ.16 ರ ರಾತ್ರಿವರೆಗೆ ಮೂರು ದಿನ ಪೊಲೀಸ್ ವಶಕ್ಕೆ ನೀಡಿತು.

ಮೇ.11. ರಂದು ಬಂಧನಕ್ಕೆ ಒಳಗಾಗಿದ್ದ ದೇವರಾಜೇಗೌಡ ಅವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಕರಣ ಸಂಬಂಧ ಆರೋಪಿಯ ವಿಚಾರಣೆ ನಡೆಸಬೇಕಿದೆ ಎಂದು ಇಂದು ಪ್ರಾಸಿಕ್ಯೂಷನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಹೊಳೆನರಸೀಪುರ ನಗರ ಠಾಣೆ ಪೊಲೀಸರು ನಾಳೆ ಬೆಳಿಗ್ಗೆ 9 ಗಂಟೆಗೆ ಹಾಸನದ ಜಿಲ್ಲಾ ಕಾರಾಗೃಹದಿಂದ ದೇವರಾಜೇಗೌಡ ಅವರನ್ನು ವಿಚಾರಣೆಗಾಗಿ ಕರೆದೊಯ್ಯಲಿದ್ದಾರೆ.