ಚನ್ನರಾಯಪಟ್ಟಣ: ಪುರಸಭೆ ಸದಸ್ಯರ ಸಂಖ್ಯಾಬಲದಲ್ಲಿ ಪಾರಮ್ಯ ಹೊಂದಿರುವ ಜೆಡಿಎಸ್ ಯಾವುದೇ ಪೈಪೋಟಿಗೆ ಅವಕಾಶವಿಲ್ಲದಂತೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.
ಪುರಸಭಾ ಅಧ್ಯಕ್ಷರಾಗಿ ನಾಲ್ಕನೇ ವಾರ್ಡ್ ಸದಸ್ಯೆ ಬನಶಂಕರಿ ರಘು, ಉಪಾಧ್ಯಕ್ಷರಾಗಿ ರಾಣಿಕೃಷ್ಣ ಅವಿರೋಧವಾಗಿ ಆಯ್ಕೆಯಾದರು.
23 ಸದಸ್ಯರ ಬಲದ ಪುರಸಭೆಯಲ್ಲಿ ಜೆಡಿಎಸ್ 16 ಹಾಗೂ ಕಾಂಗ್ರೆಸ್ ಏಳು ಸ್ಥಾನಗಳನ್ನು ಹೊಂದಿದೆ. ಹೀಗಾಗಿ ಕಾಂಗ್ರೆಸ್ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಲಿಲ್ಲ. ಜೆಡಿಎಸ್ ನಿಂದ ಎರಡೂ ಸ್ಥಾನಗಳಿಗೂ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಹೀಗಾಗಿ ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ ನವೀನ್ ಕುಮಾರ್, ಅಧ್ಯಕ್ಷರಾಗಿ ಬನಶಂಕರಿ ರಘು ಹಾಗೂ ಉಪಾಧ್ಯಕ್ಷರಾಗಿ ರಾಣಿ ಕೃಷ್ಣ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ತಾಲೂಕು ದಂಡಾಧಿಕಾರಿ ನವೀನ್ ಕುಮಾರ್, ಪುರಸಭಾ ಮುಖ್ಯ ಅಧಿಕಾರಿ ಹೇಮಂತ್, ಮಾಜಿ ಅಧ್ಯಕ್ಷರಾದ ಶಶಿಧರ್, ನವೀನ್, ಸುರೇಶ್, ರೇಖಾ ಅನಿಲ್, ಶ್ರೀಮತಿ ರಾಧ,ಮಾಜಿ ಉಪಾಧ್ಯಕ್ಷರಾದ ಯೋಗೇಶ್, ಧರಣೇಶ್, ಲಕ್ಷ್ಮಿ, ಪುರಸಭಾ ಸದಸ್ಯರಾದ ಪ್ರಕಾಶ್,ಮೋಹನ್,ಗಣೇಶ್, ಸುರೇಶ್, ಇಲಿಯಾಸ್, ಕವಿತಾ,ಮಹೇಶ್, ಸೇರಿದಂತೆ ಇತರರು ಹಾಜರಿದ್ದರು.