ಹಾಸನ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಲೋಕಾಯುಕ್ತ ಎಡಿಜಿಪಿ ಪದ ಬಳಕೆಗೆ ಗರಂ ಆಗಿರುವ ಜೆಡಿಎಸ್ ನಾಯಕರು, ತಕ್ಷಣವೇ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಕ್ಷಮೆ ಕೋರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಾಜಿ ಸಚಿವ, ಶಾಸಕ ಎ.ಮಂಜು, ಮಾಜಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎ.ಮಂಜು ಮಾತನಾಡಿ, ಎಡಿಜಿಪಿ ಬರೆದಿರುವ ಪತ್ರ ವೈರಲ್ ಆಗಿದೆ. ಅದರ ಬಗ್ಗೆ ತನಿಖೆ ಆಗಬೇಕು, ಅವರು ತನಿಖಾಧಿಕಾರಿ ಆಗಿ ಕೆಲಸ ಮಾಡ್ತಿಲ್ಲ. ಬೇರೆ ಪದಗಳನ್ನು ಬಳಸಿದ್ದಾರೆ. ಅವರು ತನಿಖಾಧಿಕಾರಿ ಆಗಲು ಅರ್ಹರಲ್ಲ ಎಂದು ಹರಿಹಾಯ್ದರು.
ಪೊಲೀಸ್ ಅಧಿಕಾರಿಗೆ ಪ್ರಕರಣದ ತನಿಖೆ ಮಾಡಿ ವರದಿ ನೀಡುವ ಕೆಲಸ ಕೊಟ್ಟಿದ್ದಾರೆ. ಇವರು ಪ್ರಚಾರ ತೆಗೆದುಕೊಳ್ಳಲು ಈ ರೀತಿ ಮಾಡಿದ್ದಾರೆ. ಎಡಿಜಿಪಿಗೆ ಪದ ಬಳಕೆ ಯಾರು ಕಲಿಸಿಕೊಟ್ಟರು ಗೊತ್ತಿಲ್ಲ. ಹುಷಾರಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು ಎಂದರು.
ಐಪಿಎಸ್ ಅಧಿಕಾರಿ ಫುಟ್‌ಪಾತ್‌ನವರ ರೀತಿ ಮಾತನಾಡಿದ್ದಾರೆ, ಅದು ಸರಿಯಲ್ಲ. ಯಾರೋ ಬರೆದ ಪುಸ್ತಕವನ್ನು ಓದಿದ್ದಾರೋ, ಬಿಟ್ಟವ್ರೋ ಗೊತ್ತಿಲ್ಲ. ಅವರು ಆ ರೀತಿ ಬರೆದಿದ್ದಾರೋ, ಬೇರೆಯವರು ಅವರ ಮೂಲಕ ಹೇಳಿಸಿರುವುದು ಎದ್ದು ಕಾಣ್ತಿದೆ ಎಂದರು.
ಪ್ರಚಾರ ಪ್ರಿಯರಾಗಿ ಮಾತಾಡುತ್ತಿರುವುದು ಸರಿಯಲ್ಲ. ಅವರ ಮೇಲೆ ಹಲವು ಆಪಾದನೆಗಳಿವೆ.
ಎಡಿಜಿಪಿ ಮಾವ ಡಿಸಿ ಆಗಿದ್ರು, ಅವರ ಹಗರಣಗಳಿವೆ, ಅವು ಮುಚ್ಚಿ ಹೋಗಿವೆ. ಎಡಿಜಿಪಿಯನ್ನು ಕಾಂಗ್ರೆಸ್ ಮಂತ್ರಿಗಳು ಅವರನ್ನೂ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಅವರು ಬರೆದಿರುವುದು ಒಬ್ಬ ಚುನಾಯಿತ ಪ್ರತಿನಿಧಿ ಮೇಲೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅಸೆಂಬ್ಲಿಗೆ ಆಗಿನ ಕಮಿಷನರ್ ಶಂಕರ್ ಬಿದರಿ ಬಂದಿದ್ದರು. ಅವರನ್ನು ಹೊರಗೆ ನೂಕಿದ್ದೆವು.
ಈ ಪ್ರಕರಣದಲ್ಲಿ ಕೂಡಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಬೇಕು. ನಾನು ಮಾಡಿರುವುದು ತಪ್ಪು ಅಂತ ಎಡಿಜಿಪಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.