ಐತಿಹಾಸಿಕ ಜೈನರಗುತ್ತಿಯಲ್ಲಿ 24 ಅಡಿ ಎತ್ತರದ ಪದ್ಮಾಸನ ಭಂಗಿಯ ಶೀತಲನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ

ಅಡಗೂರಿನಲ್ಲಿ ನೆಲೆಸಿದ್ದ ಎಸ್.ಪಿ.ನಾಗಕುಮಾರ್ ಬರಡು ಭೂಮಿಯಂತಿದ್ದ ಈಗಿನ ಜೈನರಗುತ್ತಿ ಸ್ಥಳದಲ್ಲಿ ಆಗಾಗ್ಗೆ ಪೂಜೆ ಮಾಡಿಸುತ್ತಿದ್ದರು. ಶಿವಪುರದ ಭೋವಿ ಜನಾಂಗದವರು ಭಕ್ತಿ ಭಾವದಿಂದ ಜೈನರ ಕ್ಷೇತ್ರವನ್ನು ಉಳಿಸಿರುವುದನ್ನು ಮರೆಯುವಂತಿಲ್ಲ ಎಂದು ವೀರಸಾಗರ ಮುನಿ ಮಹಾರಾಜರು ಹೇಳಿದರು.

ಹಳೇಬೀಡು: ರಾಜಸ್ಥಾನದ ಜೈಪುರದಿಂದ ಆಗಮಿಸಿದ 24 ಅಡಿ ಎತ್ತರದ ಪದ್ಮಾಸನ ಭಂಗಿಯ ಶೀತಲನಾಥ ತೀರ್ಥಂಕರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಇಲ್ಲಿಗೆ ಸಮೀಪದ ಜೈನರಗುತ್ತಿಯಲ್ಲಿ ಭಾನುವಾರ‌ ಸಂಜೆ ಸಾವಿರಾರರು ಜೈನ ಬಾಂಧವರ ಜೈಕಾರ ಹಾಗೂ ಪುರೋಹಿತರ ಮಂತ್ರ ಘೋಷದೊಂದಿಗೆ ವೈಭವದಿಂದ ನೆರವೇರಿತು.

ತೀರ್ಥಂಕರರ ಮೂರ್ತಿ ಪ್ರತಿಷ್ಟಾಪನೆಗೂ ಮೊದಲು ನವಗ್ರಹ ಶಾಂತಿ, ಪೂರ್ಣಾಹುತಿ, ನೆರವೇರಿತು. ವೇದಿಯ ಮೇಲೆ ಕಮಲ ಪೀಠವನ್ನು ಆರೋಹಣ ಮಾಡಿದ ನಂತರ ಶ್ರೀನಿಧಿ ಕಳಸ, ನವಗ್ರಹ, ನವರತ್ನ, ಪಂಚದಾತು, ಬಂಗಾರ, ಸುವರ್ಣ, ಬೆಳ್ಳಿ, ಯಂತ್ರಸ್ಥಾಪನೆ ಮಾಡಲಾಯಿತು.

ಜೈನಮುನಿ ವೀರಸಾಗರ ಮಹಾರಾಜ್ ಹಾಗೂ ಸೋಂದಾ ಜೈನ ಮಠಾಧಿಪತಿ ಭಟ್ಟಾಕಲಂಕ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಸಮ್ಮುಖದಲ್ಲಿ ಪ್ರತಿಷ್ಟಾಚಾರ್ಯರಾದ ಪವನ್ ಪಂಡಿತ್, ಪ್ರವೀಣ್ ಪಂಡಿತ್, ಸ್ಥಾನಿಕ ಪುರೋಹಿತ ಶೀತಲ್ ಪಂಡಿತ್ ಹಾಗೂ ಚಂದನ್ ಪಂಡಿತ್ ಮಂತ್ರ ಪಠಣದೊಂದಿಗೆ ವಿಧಿ ವಿಧಾನಗಳನ್ನು ನೆರವೇರಿಸಿದರು. ಬೆಂಗಳೂರಿನ ಪ್ರವೀಣ್ ಜೈನ್ ಪರಿವಾರ ಮೂರ್ತಿ ಪ್ರತಿಷ್ಟಾಪನೆಯ ಪ್ರಕ್ರಿಯೆ ನೆರವೇರಿಸಿದರು.

55 ಲಕ್ಷ ರೂ. ವೆಚ್ಚದ ಶೀತಲನಾಥ ತೀರ್ಥಂಕರರ ಮೂರ್ತಿ ದಾನಿಗಳಾದ ಛತ್ತೀಸ್ ಘಡದ  ದುರ್ಗ ನಿವಾಸಿ ದೇವೆಂದ್ರ ಕುಮಾರ್ ಜೈನ್, ಬಿನಾದೇವಿ ಕಲಾ, ಸಜಲ್ ಜೈನ್, ಮಯೂರಿ ಕಲಾ ಪರಿವಾರ, ಮೂರ್ತಿ ಕೆತ್ತನೆ ಮಾಡಿದ ರಾಜಸ್ತಾನದ ಶಿಲ್ಪಿಗಳಾದ ಪ್ರೀತಂ, ಮದನ್ಲಾಲ್ ಉಪಸ್ಥಿತರಿದ್ದರು.

ತೀರ್ಥಂಕರ ಬೃಹತ್  ಮೂರ್ತಿ ಹಾಗೂ ಕಮಲ ಪೀಠವನ್ನು ಕ್ರೇನ್ ಸಹಾಯದಿಂದ ವೇದಿಯ ಮೇಲೆ ಆರೋಹಣ ಮಾಡಲಾಯಿತು.

ಕಳೆದ ಒಂದು ದಶಕದಿಂದ ಅಭಿವೃದ್ಧಿ ಕಾಣುತ್ತಿರುವ ಜೈನರಗುತ್ತಿ ಕ್ಷೇತ್ರ ಐತಿಹಾಸಕ ಮಹತ್ವ ಹೊಂದಿರುವ ಪುಣ್ಯ ಕ್ಷೇತ್ರ ಎಂದು ಜೈನಮುನಿ ವೀರಸಾಗರ ಮಹಾರಾಜ್ ಹೇಳಿದರು.

ಜೈನರಗುತ್ತಿ ಕ್ಷೇತ್ರದಲ್ಲಿ ಭಾನುವಾರ ಶೀತಲನಾಥ ತೀರ್ಥಂಕರ ಮೂರ್ತಿ ಪ್ರತಿಷ್ಟಾಪನೆ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಶ್ರವಣಬೆಳಗೂಳದ ಮಠಾಧೀಶರಿಗೆ  ಜೀವ ರಕ್ಷಾ ಪರಿಪಾಲಕ ಎಂದು ಹೊಯ್ಸಳ ದೊರೆ ಬಲ್ಲಾಳರಾಯ ಬಿರುದು ನೀಡಿದ ಸ್ಥಳವಾಗಿದೆ. ಹೊಯ್ಸಳರ ಕಾಲದಲ್ಲಿ ರಾಶಿಗುಡ್ಡದಲ್ಲಿ ಜ್ವಾಲಮುಖಿ ಸಂಭವಿಸಿ ಭೂಮಿ ಬಿರುಕು ಬಿಟ್ಟಿತ್ತು. ವ್ಯಾಪಿಸುತ್ತಿದ್ದ ಜ್ವಾಲೆಯನ್ನು ಶಮನಗೊಳಿಸಿ ಬಿರುಕು ನಿಲ್ಲಿಸುವುದು ಹೊಯ್ಸಳ ದೊರೆ ಬಲ್ಲಾಳರಾಯನಿಗೆ ಕಷ್ಟವಾಗಿ ಪರಿಣಮಿಸಿತ್ತು.

ಶ್ರವಣಬೆಳಗೊಳದ ಚಾರುಕೀರ್ತಿ ಪೀಠದ ಸ್ವಾಮೀಜಿ ಕೂಶ್ಮಾಂಡಿನಿ ಮೂರ್ತಿಯನ್ನು ಆನೆಯ ಮೇಲೆ ಆರೋಹಣ ಮಾಡಿಕೊಂಡು ಕರೆತಂದು ಪೂಜಾ ವಿಧಾನ ನಡೆಸಿದರು. ಮಂತ್ರ ಪಠಣದೊಂದಿಗೆ ಕುಂಬಳಕಾಯಿ ಸಮರ್ಪಿಸಿದ ನಂತರ ಭೂಮಿ ಬಿರುಕು ನಿಂತಿತು ಎಂಬುದು ರಾಜಾವಳಿ ಗ್ರಂಥದಲ್ಲಿ ಉಲ್ಲೇಖವಾಗಿದೆ.

ಅಡಗೂರಿನಲ್ಲಿ ನೆಲೆಸಿದ್ದ ಎಸ್.ಪಿ.ನಾಗಕುಮಾರ್ ಬರಡು ಭೂಮಿಯಂತಿದ್ದ ಈಗಿನ ಜೈನರಗುತ್ತಿ ಸ್ಥಳದಲ್ಲಿ ಆಗಾಗ್ಗೆ ಪೂಜೆ ಮಾಡಿಸುತ್ತಿದ್ದರು. ಶಿವಪುರದ ಭೋವಿ ಜನಾಂಗದವರು ಭಕ್ತಿ ಭಾವದಿಂದ ಜೈನರ ಕ್ಷೇತ್ರವನ್ನು ಉಳಿಸಿರುವುದನ್ನು ಮರೆಯುವಂತಿಲ್ಲ ಎಂದು ವೀರಸಾಗರ ಮುನಿ ಮಹಾರಾಜರು ಹೇಳಿದರು.

ಸೋಂದಾ ದಿಗಂಬರ ಜೈನ ಮಠದ ಪೀಠಾಧಿಪತಿ ಭಟ್ಟಾಕಲಂಕ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ವೀರಸಾಗರ ಮುನಿ ಮಹಾರಾಜದ ಪಾದಸ್ಪರ್ಶದಿಂದ ಜೈನರಗುತ್ತಿ ಕ್ಷೇತ್ರ ಅಭಿವೃದ್ದಿ ಹೊಂದುತ್ತಿದೆ. ಕ್ಷೇತ್ರ ಕರ್ನಾಟಕ ಭಕ್ತರು ಮಾತ್ರವಲ್ಲದೆ ಹೊರರಾಜ್ಯದವರನ್ನು ಸೆಳೆಯುತ್ತಿದೆ. ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ಶೈಕ್ಷಣಿಕ, ಆರೋಗ್ಯ ಮೊದಲಾದ ಸೇವೆಗಳು ಕವಲೊಡೆಯುತ್ತವೆ ಎಂದರು.

ಕ್ಷೇತ್ರದ ಪದಾಧಿಕಾರಿಗಳಾದ ಕುಣಿಗಲ್ ಬ್ರಹ್ಮದೇವ ಜೈನ್, ನೇಮಿರಾಜ ಆರಿಗ, ಧನಪಾಲ್ ಜೈನ್, ಎಸ್.ಎನ್.ಅಶೋಕ್ ಕುಮಾರ್, ಹೊಂಗೇರಿ ದೇವೇಂದ್ರ, ಕೀರ್ತಿಕುಮಾರ್, ಶಶಿಕುಮಾರ್, ಮನ್ಮಥರಾಜು, ಧಾವನ್ ಜೈನ್ ಭಾಗವಹಿಸಿದ್ದರು.

The installation ceremony of the 24-feet toll Padmasana statue of Sheetalanath Tirthankara was completed with grandeur on Sunday evening with the chanting of thousands of Jain devotees and chanting of mantras by priests.