ಹಾಸನ : ಕಾಡಾನೆ ಟ್ರ್ಯಾಕ್ ಮಾಡುತ್ತಿದ್ದ ಇಟಿಎಫ್ (ತುರ್ತು ಸ್ಪಂದನಾ ಪಡೆ) ಸಿಬ್ಬಂದಿಯೊಬ್ಬರನ್ನು ಸಲಗವೊಂದು ಅಟ್ಟಾಡಿಸಿದ ಘಟನೆ ಸಕಲೇಶಪುರ ತಾಲ್ಲೂಕಿನ ಯಡೇಹಳ್ಳಿಯಲ್ಲಿ ನಡೆದಿದೆ.
ಕಾಡಾನೆ ಸೆರೆ ಹಾಗೂ ರೇಡಿಯೋ ಕಾಲರ್ ಅಳವಡಿಕೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.
ಈ ವೇಳೆ ಕಾರ್ಯಪಡೆ ಸಿಬ್ಬಂದಿಯನ್ನು ಕಂಡ ಕರಡಿ ಹೆಸರಿನ ಆನೆ ಘೀಳಿಡುತ್ತಾ ಅಟ್ಟಾಡಿಸಿದೆ.
ಅಪಾಯದ ಮುನ್ಸೂಚನೆ ಅರಿತ ಸಿಬ್ಬಂದಿ ಕೂಡಲೇ ಸ್ಕೂಟಿಯನ್ನು ಬಿಟ್ಟು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಕೆಲಕಾಲ ಕಾಫಿ ಗಿಡದ ಮರೆಯಲ್ಲಿ ನಿಂತಿದೆ. ಈ ದೃಶ್ಯವನ್ನು ಇಟಿಎಫ್ ಸಿಬ್ಬಂದಿ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬ ಕೂಲಿ ಕಾರ್ಮಿಕನನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆ ಇದೆ ಆಗಿದೆ. ಕಾಡಾನೆಗಳ ಸೆರೆ ಕಾರ್ಯಾಚರಣೆ ಕೈಗೊಂಡಿರುವ ಅರಣ್ಯ ಇಲಾಖೆ ಎರಡು ದಿನ ರಜೆ ಘೋಷಿಸಿದ್ದು, ಬುಧವಾರದಿಂದ ಕಾರ್ಯಪ್ರವೃತ್ತರಾಗಲಿದ್ದಾರೆ. ಸದ್ಯ ಸಾಕಾನೆಗಳು ಬೇಲೂರಿನ ಬಿಕ್ಕೋಡು ಕ್ಯಾಂಪ್ ನಲ್ಲಿವೆ.