ಪೌರ ಕಾರ್ಮಿಕ ಮಹಿಳೆಯನ್ನು ನಿಂದಿಸಿದವನ ಮನೆ ಎದುರು ತ್ಯಾಜ್ಯ ಸುರಿದ ಪೌರಕಾರ್ಮಿಕರು!

ಸಕಲೇಶಪುರದ ಬ್ರಾಹ್ಮಣರ ಬೀದಿ ನಿವಾಸಿ ಅಭಿ ವಿರುದ್ಧ ಪೌರ ಕಾರ್ಮಿಕ ಮಹಿಳೆಯಿಂದ ದೂರು; ಕಸ ಎಸೆಯದಂತೆ ಹೇಳಿದ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ

ಹಾಸನ: ರಸ್ತೆ ಬದಿ ತ್ಯಾಜ್ಯ ಎಸೆಯುವುದನ್ನು ಪ್ರಶ್ನಿಸಿದ ಪುರಸಭೆ ಸ್ವಚ್ಛತಾ ಕಾರ್ಮಿಕ ಮಹಿಳೆಯನ್ನು ನಿಂದಿಸಿದ ವ್ಯಕ್ತಿಯ ಮನೆ ಎದುರು ಪೌರ ಕಾರ್ಮಿಕರು ಕಸ ಸುರಿದು ಪ್ರತಿಭಟಿಸಿದ ಘಟನೆ ಸಕಲೇಶಪುರ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಬಡಾವಣೆಯಲ್ಲಿ ಸ್ವಚ್ಛತೆ ಮಾಡುತ್ತಿದ್ದ ಪೌರಕಾರ್ಮಿಕರ ಎದುರಿಗೇ ಸ್ಥಳೀಯ ನಿವಾಸಿ ಅಭಿ ತನ್ನ ಮನೆಯ ಎದುರಿಗೇ ಕಸ ಬೀಸಾಡಿದ.

ಇದನ್ನು ಪ್ರಶ್ನಿಸಿದ ಪೌರಕಾರ್ಮಿಕ ಮಹಿಳೆ‌ ಮಾಲಾ, ಎಲ್ಲೆಂದರಲ್ಲಿ ಕಸ ಬೀಸಾಡಬೇಡಿ ಮನೆಯ ಬಳಿಗೆ ಪುರಸಭೆ ಆಟೋ, ಟ್ರ್ಯಾಕ್ಟರ್ ಬರುತ್ತದೆ ಅದರಲ್ಲಿ ಕಸ ಹಾಕಿ ಸ್ವಚ್ಛತೆ ಕಾಪಾಡಿ ಎಂದರು.

ಇದರಿಂದ ಸಿಟ್ಟಿಗೆದ್ದ ಅಭಿ ಪೌರ ಕಾರ್ಮಿಕ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ.

ಇದರಿಂದ ಸಿಟ್ಟಿಗೆದ್ದ ಪೌರ ಕಾರ್ಮಿಕರು ಅಭಿ ಅವರ ನಿವಾಸದ ಎದುರು ಕಸ ಸುರಿದು ಪ್ರತಿಭಟನೆ ನಡೆಸಿದರು. ನಂತರ ಸ್ಥಳೀಯ ಮುಖಂಡರು ಸಮಾಧಾನಪಡಿಸಿದ ನಂತರ ಪ್ರತಿಭಟನಾಕಾರರು ಕಸ ತೆರವು ಮಾಡಿದರು.

ನಂತರ ನಗರ ಠಾಣೆಗೆ ತೆರಳಿದ ಮಾಲಾ ಅಭಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ನೀಡಿದರು.