ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ, ಕುರ್ಚಿಗಳು ಪುಡಿ; ಸಚಿವ ರಾಜಣ್ಣ ವಿರುದ್ಧ ಮುಗಿಬಿದ್ದ ಶ್ರೀಧರ್ ಗೌಡ ಬೆಂಬಲಿಗರು

ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಾಡಿಗೆ ಗಿರಾಕಿಗಳು ಎಂದು ಜರಿದ ರಾಜಣ್ಣ

ಹಾಸನ: ಅರಕಲಗೂಡು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀಧರ್ ಗೌಡ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ನಡವಳಿಕೆ ವಿರುದ್ಧ ಶ್ರೀಧರ್ ಬೆಂಬಲಿಗರು ತಿರುಗಿಬಿದ್ದು ಕಾರ್ಯಕರ್ತರ ಗು‌ಂಪುಗಳು ಕೈಕೈ ಮಿಲಾಯಿಸಿ, ಕುರ್ಚಿಗಳನ್ನು ಪುಡಿ ಮಾಡಿದ ಘಟನೆ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ನಡೆಯಿತು.

ಮಾ.30 ರಂದು ಹಾಸನ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ತಮ್ಮ ಭಾಷಣದ ವೇಳೆ ಈ ಬಾರಿ ಅರಕಲಗೂಡಿನಲ್ಲಿ 30 ಸಾವಿರ ಲೀಡ್ ಕೊಡ್ತೇವೆ ಎಂದಿದ್ದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ್‌ಗೌಡ ಹೇಳಿದರು.

ಶ್ರೀಧರ್‌ಗೌಡ ಮಾತನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, 30 ಸಾವಿರ ಲೀಡ್ ನೀಡೋನು ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ ಎಂದು ಸಚಿವ ರಾಜಣ್ಣ ವ್ಯಂಗ್ಯವಾಗಿ ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಧರ್ ಬೆಂಬಲಿಗ ಕಾರ್ಯಕರ್ತರು ಕೂಗಾಡಿ ರಾಜಣ್ಣ ಭಾಷಣಕ್ಕೆ ಅಡ್ಡಿಪಡಿಸಿದರು.

ಇದರಿಂದ ಕೆರಳಿದ ರಾಜಣ್ಣ, ನೀವು ಶ್ರೇಯಸ್ ಪಟೇಲ್ ಗೆಲ್ಲಿಸಲು ಬಂದಿದ್ದೀರಾ ಅಥವಾ ಸೋಲಿಸಲು ಬಂದ್ದಿದ್ದೀರಾ? ನಿಮ್ಮ ನಡವಳಿಕೆ ಶ್ರೀಧರ್ ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು‌ ಎಚ್ಚರಿಸಿದರು.

ಶ್ರೀಧರ್ ಎದ್ದು ನಿಂತು ಸಮ್ಮನಾಗುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರೂ ಸುಮ್ಮನಾಗದ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸುವುದನ್ನು ಮುಂದುವರಿಸಿದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ರಾಜಣ್ಣ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಾಡಿಗೆ ಗಿರಾಕಿಗಳು ಎಂದು ಜರಿದರು. ಇದಕ್ಕೆ ಪ್ರತಿಯಾಗಿ ಕಾರ್ಯಕರ್ತರ ವಿರೋಧವೂ ಹೆಚ್ಚಿತು.

ಆಗ ವೇದಿಕೆಯಲ್ಲಿದ್ದ ಮುಖಂಡರು, ಅವರ ಬೆಂಬಲಿಗರು ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದವರ ಮೇಲೆ ಮುಗಿಬಿದ್ದರು.‌ ಅದು ಪರಸ್ಪರ ಕೈಕೈ ಮಿಲಾಯಿಸುವ ಹಂತ ತಲುಪಿತು. ಕೆಲವರು ಕುರ್ಚಿಗಳನ್ನು ಪೀಸ್ ಪೀಸ್ ಮಾಡಿ ಆಕ್ರೋಶ ಹೊರಹಾಕಿದರು.

ಕಾರ್ಯಕರ್ತರನ್ನು ನಿಯಂತ್ರಿಸಲು ಕೈ ಮುಖಂಡರು ಹರಸಾಹಸಪಟ್ಟರೂ ಫಲ ಸಿಗದಿದ್ದರಿಂದ ರಾಜಣ್ಣ ತಮ್ಮ ಭಾಷಣ ನಿಲ್ಲಿಸಿ ಸಿಟ್ಟಿನಿಂದ ವೇದಿಕೆ ಮೇಲೆ ಹೋಗಿ ಕುಳಿತರು.

ಜಿಲ್ಲೆಗೆ ಪಕ್ಷದ ಉಸ್ತುವಾರಿಯಾಗಿ ಆಗಮಿಸಿರುವ ಸಂಸದ ಚಂದ್ರಶೇಖರ್ ಎಲ್ಲ ಗಲಾಟೆ ನೋಡುತ್ತಾ ಮೌನವಾಗಿ ಕುಳಿತರು.