ಹಾಸನ : ರಾತ್ರಿಯಿಡೀ ವಾಸದ ಮನೆಯ ಬಳಿ ನಿಂತ ನರಹಂತಕ ಕಾಡಾನೆ ಕರಡಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಘಟನೆ ಬೇಲೂರು ತಾಲ್ಲೂಕಿನ, ಮಾಲೂರು ಗ್ರಾಮದಲ್ಲಿ ನಡೆದಿದೆ.
ರಾತ್ರಿಯಿಂದ ಬೆಳಿಗ್ಗೆವರೆಗೂ ನಾಗರಾಜ್ ಎಂಬರ ಮನೆಯ ಮುಂದೆಯೇ ನಿಂತಿದ್ದ ಕಾಡಾನೆ, ಮುಂಜಾನೆ ರಸ್ತೆಗೆ ಬಂದು ನಿಂತಿತ್ತು. ಆಗಾಗ್ಗೆ ಮತ್ತೆ ಕಾಫಿ ತೋಟದೊಳಗೆ ಹೋಗಿ ಪುನಃ ರಸ್ತೆಗೆ ಬರುತ್ತಿರುವ ಕರಡಿ ಕಂಡು ವಾಹನ ಸವಾರರು ವಾಹನಗಳನ್ನು ನಿಲ್ಲಿಸಿಕೊಂಡು ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ನಾಗರಾಜ್ ಎಂಬವರ ಮನೆ ಬಳಿ ಇರುವ ಕರಡಿ ಹೆಸರಿನ ಕಾಡಾನೆ ಮದದಲ್ಲಿದ್ದು ಜನರು ಭಯ ಭೀತರಾಗಿದ್ದಾರೆ. ಕಾಡಾನೆ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕರಡಿ ಭಯದಿಂದ ಮನೆಯಿಂದ ಹೊರಬರಲು ಕುಟುಂಬ ಹಿಂದೇಟು ಹಾಕಿದೆ.
ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಕಾಡಾನೆ ಚಲನ ವಲನದ ಮೇಲೆ ನಿಗಾ ಇಟ್ಟಿದ್ದಾರೆ. ಈ ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಯನ್ನು ಸ್ಥಳೀಯರ ಆಗ್ರಹಿಸಿದ್ದಾರೆ.