ಕಾಫಿ ಫಸಲು ತುಂಬಿದ್ದ ಚೀಲ ತರಲು ತೋಟಕ್ಕೆ ಹೋದವರ ಕಾಲು ಮುರಿದ ಕಾಡಾನೆ ಹೆಸರು ಕರಡಿ!

ಹಾಸನ: ಕಾಫಿ ಫಸಲು ತುಂಬಿದ ಚೀಲಗಳನ್ನು ತರಲು ಕಾಫಿ ತೋಟಕ್ಕೆ ತೆರಳಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಓರ್ವನ ಕಾಲುಮುರಿತವಾಗಿ, ಮತ್ತೋರ್ವ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಕಲ್ಕುಂದ ಗ್ರಾಮದಲ್ಲಿ ನಡೆದಿದೆ‌‌.

ರಮೇಶ್, ಶಾಶ್ವತ್ ಕಾಡಾನೆ ದಾಳಿಯಿಂದ ಗಾಯಗೊಂಡವರು. ಕಾಫಿ ಬೀಜ ಕೊಯ್ಲು ಮಾಡಿ ಚೀಲಗಳಲ್ಲಿ ತುಂಬಿ ಕಾಫಿ ತೋಟದಲ್ಲಿ ಇಡಲಾಗಿದ್ದು, ಚೀಲಗಳನ್ನು ತರಲು ರಮೇಶ್ ಹಾಗೂ ಶಾಶ್ವತ್ ಕಾಫಿ ತೋಟಕ್ಕೆ ತೆರಳಿದ್ದರು.

ಈ ವೇಳೆ ಕರಡಿ ಹೆಸರಿನ ಕಾಡಾನೆ ಏಕಾಏಕಿ ದಾಳಿ ಮಾಡಿದೆ‌. ಕಾಡಾನೆ ತುಳಿತದಿಂದ ರಮೇಶ್ ಕಾಲು ಮುರಿತವಾಗಿದ್ದು, ಕಾಡಾನೆಯಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಶಾಶ್ವತ್ ಬಿದ್ದು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಮಲೆನಾಡು ಭಾಗದ ಜನ ಹಿಡಿಶಾಪ ಹಾಕುತ್ತಿದ್ದಾರೆ.