ಹಾಸನ: ಪತ್ನಿಯ ತವರು ಮನೆಗೆ ನುಗ್ಗಿ ಮಡದಿಯ ಕುತ್ತಿಗೆ ಕೊಯ್ದ ಪತಿ ಆಕೆ ಸತ್ತಿದ್ದಾಳೆ ಎಂದು ಭಾವಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ಬಿಟ್ಟಗೌಡನಹಳ್ಳಿಯಲ್ಲಿ ನಡೆದಿದೆ.
ಮೂಲತಃ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಗೌರಿಕೊಪ್ಪಲಿನ ಪ್ರಶಾಂತ (32) ಮೃತ ಪತಿ, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪತ್ನಿ ಬಿಂದು (24) ಹಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಎರಡುವರೆ ವರ್ಷಗಳ ಹಿಂದೆ ಬಿಟ್ಟಗೌಡನಹಳ್ಳಿಯ ಬಿಂದು ಅವರನ್ನು ಪ್ರಶಾಂತ್ ವಿವಾಹವಾಗಿದ್ದವರು. ಆದರೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೆ ಕಲಹ ಮಾಮೂಲಿಯಾಗಿತ್ತು.
ಇದರಿಂದ ಬೇಸತ್ತ ಬಿಂದು ಕಳೆದ ಮೂರು ತಿಂಗಳಿನಿಂದ ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು.
ಬುಧವಾರ ಬೆಳಗ್ಗೆ ಪತ್ನಿಯ ತವರು ಮನೆ ಬಳಿ ಬಂದು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಶಾಂತ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾನೆ. ಕೆಳಗೆ ಬಿದ್ದ ಪತ್ನಿ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಆತ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಲ್ಲೆಯಿಂದ ಗಾಯಗೊಂಡು ಆಘಾತಕ್ಕೊಳಗಾಗಿದ್ದ ಪತ್ನಿ ನಂತರ ಚೇತರಿಸಿಕೊಂಡು ಎದ್ದು ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.
ಹೊಳೆನರಸೀಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.